News Kannada
Tuesday, September 27 2022

ಕರ್ನಾಟಕ

ನಿರ್ವಾಣಪ್ಪ ಬಂಧನ ಪ್ರಕರಣ: ಅಧಿಕಾರಿಗಳ ಅಮಾನತಿಗೆ ಆಗ್ರಹ - 1 min read

Photo Credit :

ನಿರ್ವಾಣಪ್ಪ ಬಂಧನ ಪ್ರಕರಣ: ಅಧಿಕಾರಿಗಳ ಅಮಾನತಿಗೆ ಆಗ್ರಹ

ಮಡಿಕೇರಿ: ಸಾಮಾಜಿಕ ಹೋರಾಟಗಾರ ಡಿ.ಎಸ್.ನಿರ್ವಾಣಪ್ಪ ಅವರನ್ನು ಬಂಧನಕ್ಕೆ ಒಳಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ತಹಶೀಲ್ದಾರ್ ಹಾಗೂ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಬಿ.ಎಸ್. ನಿರ್ವಾಣಪ್ಪ, ಕುಶಾಲನಗರದ ವಾಲ್ಮೀಕಿ ಪರಿಹಾರ ಕೇಂದ್ರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಹಶೀಲ್ದಾರ್ ಹಾಗೂ ತಮ್ಮನ್ನು ಬಂಧನಕ್ಕೆ ಒಳಪಡಿಸಿದ ಪ್ರಬಾರ ತಹಶೀಲ್ದಾರ್ ಮತ್ತು ಠಾಣಾಧಿಕಾರಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ನಿರಾಶ್ರಿತರ ಮೇಲೆ ಹಲ್ಲೆ ಮಾಡಿರುವ ಆರೋಪ ಎದುರಿಸುತ್ತಿರುವ ತಹಶೀಲ್ದಾರ್ ಮಹೇಶ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಪರಿಹಾರ ಕೇಂದ್ರದಲ್ಲಿ 272 ಸಂತ್ರಸ್ತರಿದ್ದು, ಇವರನ್ನು ಕಾರಾಗೃಹದಲ್ಲಿ ಇಟ್ಟಂತೆ ಇಡಲಾಗಿದೆ. ಪರಿಹಾರ ಕೇಂದ್ರ್ರದಿಂದ ಹೊರಗೆ ಹೋಗಿ ಎಂದು ಒತ್ತಡ ಹೇರಲಾಗುತ್ತಿದೆ.

ಸಂತ್ರಸ್ತರ ಹಾಜರಾತಿ ಪಡೆಯಲು ರಾತ್ರಿ 11 ಗಂಟೆಗೆ ಪರಿಹಾರ ಕೇಂದ್ರರಕ್ಕೆ ಪ್ರವೇಶಿಸಿದ ಸೋಮವಾರಪೇಟೆ ತಹಶೀಲ್ದಾರ್ ಅಲ್ಲಿದ್ದ ಕೆಲವರನ್ನು ಎಳೆದಾಡಿದ್ದಾರೆ. ಪರಿಹಾರ ಕೇಂದ್ರ್ರಕ್ಕೆ ರಾತ್ರಿ ಭೇಟಿ ನೀಡಿದ ಕ್ರಮಕ್ಕೆ ಸಂತ್ರಸ್ತರು ಆಕ್ಷೇಪ ವ್ಯಕ್ತಪಡಿಸಿದಾಗ ಚಿತ್ರ ಮತ್ತು ಸೀನ ಎಂಬವರ ಮೇಲೆ ತಹಶೀಲ್ದಾರ್ ಹಲ್ಲೆ ನಡೆಸಿದ್ದಾರೆ. ಇದೇ ಕಾರಣದಿಂದ ಅಲ್ಲಿದ್ದವರು ತಹಶೀಲ್ದಾರರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.

ಓಡುವ ಸಂದರ್ಭ ನೆಲಕ್ಕುರುಳಿದ ತಹಶೀಲ್ದಾರ್ ಮಹೇಶ್ ಅವರ ತಲೆಗೆ ಗಾಯವಾಗಿದೆಯೇ ಹೊರತು ಸಂತ್ರಸ್ತರು ಯಾರೂ ಹಲ್ಲೆ ನಡೆಸಿಲ್ಲವೆಂದು ಸ್ಪಷ್ಟಪಡಿಸಿದರು.

ಚಿತ್ರಾ ಮತ್ತು ಸೀನ ಆಸ್ಪತ್ರೆಗೆ ದಾಖಲಾಗಿದ್ದರು ಕೇವಲ ತಹಶೀಲ್ದಾರ್ ನೀಡಿದ ದೂರನ್ನು ಪುರಸ್ಕರಿಸಿ 15 ಮಂದಿಯನ್ನು ಬಂಧಿಸಿರುವುದು ಖಂಡನೀಯವೆಂದರು. ಪುಟ್ಟ ಮಕ್ಕಳ ಸಹಿತ ಇಬ್ಬರು ಮಹಿಳೆಯರು ಸೇರಿ ಇತರರು ಬಂಧನದ ಶಿಕ್ಷೆಯನ್ನು ಅನುಭವಿಸುತ್ತಿದ್ದು, ತಕ್ಷಣ ಇವರನ್ನು ಬಿಡುಗಡೆಗೊಳಿಸಬೇಕೆಂದು ನಿರ್ವಾಣಪ್ಪ ಒತ್ತಾಯಿಸಿದರು.

ಸಮಿತಿಯ ಪ್ರಮುಖ ಅಮಿನ್ ಮೊಹಿಸಿನ್ ಮಾತನಾಡಿ, ಮಾನವತಾವಾದಿಗಳನ್ನು ದಮನ ಮಾಡುವ ಕಾರ್ಯ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದು, ದಿಡ್ಡಳ್ಳಿ ಹೋರಾಟವನ್ನು ಕಳಂಕಿತ ಎನ್ನುವ ರೀತಿಯಲ್ಲಿ ಅಧಿಕಾರಿ ಶಾಹಿ ವರ್ಗ ಪ್ರತಿಬಿಂಬಿಸುತ್ತಿದ್ದು, ಇದನ್ನು ಖಂಡಿಸುವುದಾಗಿ ತಿಳಿಸಿದರು. ನಿರಂತರ ಹೋರಾಟದಿಂದ ಮಾತ್ರ ದುರ್ಬಲರು ಹಾಗೂ ಜನ ಸಾಮಾನ್ಯರಿಗೆ ನ್ಯಾಯ ಸಿಗಲು ಸಾಧ್ಯವೆಂದು ಅಭಿಪ್ರಾಯಪಟ್ಟ ಅವರು, ಪರಿಹಾರೋಪಾಯಗಳ ಸಂದರ್ಭ ಲೋಪಗಳನ್ನು ಸರಿಪಡಿಸುವ ಜವಾಬ್ದಾರಿ ಪ್ರತಿಯೊಬ್ಬರ ನಾಗರಿಕನ ಮೇಲೆ ಇರುವುದರಿಂದಲೇ ಸಮಿತಿ ಹೋರಾಟದ ಹೇಳಿಕೆಯನ್ನು ನೀಡಿದೆ ಎಂದು ಸ್ಪಷ್ಟಪಡಿಸಿದರು.
ಡಿ.ಎಸ್.ನಿರ್ವಾಣಪ್ಪ ಅವರ ಬಂಧನದ ರೀತಿಯ ಪ್ರಕರಣಗಳು ಮರುಕಳಿಸಬಾರದೆಂದು ತಿಳಿಸಿದ ಅಮಿನ್ ಮೊಹಿಸಿನ್, ಸಂತ್ರಸ್ತರ ಪರ ಕಾನೂನು ಹೋರಾಟವೂ ಮುಂದುವರಿಯಲಿದೆ ಎಂದು ತಿಳಿಸಿದರು.

94ಸಿ ಮತ್ತು 94ಸಿಸಿ ಯಡಿ ಅರ್ಜಿ ಸಲ್ಲಿಸಿದ ನಿವಾಸಿಗಳಿಗೆ ಹಕ್ಕುಪತ್ರ ನೀಡದೆ ತಪ್ಪು ಮಾಡಿರುವ ಅಧಿಕಾರಿಗಳು ಇದೀಗ ಮಳೆಹಾನಿ ನಿರಾಶ್ರಿತರ ಬಳಿ ಹಕ್ಕುಪತ್ರ ಇದ್ದರೆ ಮಾತ್ರ ಮನೆ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ, ಸಂತ್ರಸ್ತರಲ್ಲಿ ಅಂದಾಜು 60 ಕುಟುಂಬಗಳು 94ಸಿ ಮತ್ತು 94ಸಿಸಿಯಡಿ ಅರ್ಜಿ ಸಲ್ಲಿಸಿದವರೆ ಆಗಿದ್ದು, ಅಧಿಕಾರಿಗಳು ಹಕ್ಕು ಪತ್ರ ನೀಡದೆ ಇರುವ ಕಾರಣಕ್ಕಾಗಿ ಇದೀಗ ಅಸಹಾಯಕ ಪರಿಸ್ಥಿತಿ ಎದುರಿಸುವಂತಾಗಿದೆ. ಜಿಲ್ಲಾಡಳಿತ ಪರಿಹಾರ ನೀಡುವ ಸಂದರ್ಭ ಇವರುಗಳಿಗೂ ಸಮಾನ ಸೌಲಭ್ಯ ನೀಡಬೇಕೆಂದು ಅಮಿನ್ ಮೊಹಿಸಿನ್ ಒತ್ತಾಯಿಸಿದರು.

See also  ಉಪಚುನಾವಣೆ ಫಲಿತಾಂಶ ಬಳಿಕ ಸರ್ಕಾರ ಪತನ: ಕುಮಾರಸ್ವಾಮಿ

ಬಿಎಸ್‍ಪಿ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಮಾತನಾಡಿ, ನಿರ್ವಾಣಪ್ಪ ಅವರ ವಾಕ್ ಸ್ವಾತಂತ್ರ್ಯಕ್ಕೆ ದಕ್ಕೆ ತಂದಿರುವ ಅಧಿಕಾರಿಗಳ ಕ್ರಮ ಖಂಡನೀಯವೆಂದರು. ಬಹುಜನ ಕಾರ್ಮಿಕ ಸಂಘದ ಪ್ರಮುಖ ಮೊಣ್ಣಪ್ಪ ಮಾತನಾಡಿ, ನಿರ್ವಾಣಪ್ಪ ಅವರ ಬಂಧನಕ್ಕೆ ಕಾರಣಕರ್ತರಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಅಧ್ಯಕ್ಷ ಎಸ್.ಆರ್.ಮಂಜುನಾಥ್ ಹಾಗೂ ಹೆಚ್.ಸಿ.ಸಣ್ಣಪ್ಪ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು