News Kannada
Thursday, September 29 2022

ಕರ್ನಾಟಕ

ನಗರಸಭೆ ಸ್ಥಾಯಿ ಸಮಿತಿ ಸಭೆ : ಅಶುಚಿತ್ವದ ವಿರುದ್ಧ ಅಸಮಾಧಾನ - 1 min read

Photo Credit :

ನಗರಸಭೆ ಸ್ಥಾಯಿ ಸಮಿತಿ ಸಭೆ : ಅಶುಚಿತ್ವದ ವಿರುದ್ಧ ಅಸಮಾಧಾನ

ಮಡಿಕೇರಿ:  ನಗರದ ಚರಂಡಿಗಳು ಸೇರಿದಂತೆ 23 ವಾರ್ಡ್‍ಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಸಮಾರೋಪಾದಿಯಲ್ಲಿ ಕೈಗೊಳ್ಳಲು ನಗರ ಸಭೆ ಸ್ಥಾಯಿ ಸಮಿತಿ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ.ಉಣ್ಣಿಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸ್ಥಾಯಿ ಸಮಿತಿ ತುರ್ತು ಸಭೆಯಲ್ಲಿ ನಗರದ ಅಶುಚಿತ್ವದ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಾಡಹಬ್ಬ ದಸರಾದ ಕರಗ ಮಹೋತ್ಸವಕ್ಕೆ ಬೆರಳೆಣಿಕೆ ದಿನಗಳು ಮಾತ್ರ ಉಳಿದಿದ್ದು, ಕರಗ ತೆರಳುವ ರಸ್ತೆಗಳ ಚರಂಡಿಗಳೆಲ್ಲವೂ ಕೊಳಚೆ ನೀರಿನಿಂದ ತುಂಬಿಕೊಂಡಿದೆ.

ಅದರೊಂದಿಗೆ ಯು.ಜಿ.ಡಿ ಕಾಮಗಾರಿಗಳು ನಗರದ ರಸ್ತೆಯನ್ನು ಬಲಿ ಪಡೆದಿದ್ದು ದಸರಾ ಮುನ್ನವೇ ನಗರ ರಸ್ತೆಗಳ ದುರಸ್ಥಿಕಾರ್ಯ ನಡೆಸುವಂತೆ ಸದಸ್ಯರು ಒತ್ತಾಯಿಸಿದರು. ನಗರಸಭೆಯ ಸದಸ್ಯೆ ಸವಿತಾ ರಾಕೇಶ್ ಮಾತನಾಡಿ ಗಣಪತಿ ಬೀದಿ ವಾರ್ಡ್‍ಗೆ 1 ತಿಂಗಳಲ್ಲಿ ಕೇವಲ 6 ಬಾರಿ ಮಾತ್ರವೇ ಕಸ ಸಂಗ್ರಹಿಸುವ ವಾಹನಗಳು ಬಂದಿದೆ. ಹೀಗಾದರೆ ಜನರು ಕಸ ಎಲ್ಲಿ ಸುರಿಯಬೇಕು. ಚರಂಡಿಗಳಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು ಸ್ವಚ್ಚತೆಯೇ ಮರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಕೆ.ಜೆ.ಪೀಟರ್ ಮಾತನಾಡಿ ನಗರಸಭೆಯಲ್ಲಿ ಸ್ವಚ್ಚತಾ ಕಾರ್ಮಿಕರ ಕೊರತೆ ಇದೆ. ಹೀಗಿದ್ದರು ಕೂಡ ಹೊರಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರನ್ನು ಸೇವೆಗೆ ಏಕೆ ನಿಯೋಜಿಸಿಕೊಳ್ಳಲಿಲ್ಲ ಎಂದು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ರಮೇಶ್, 30 ಮಂದಿ ಸಿಬ್ಬಂದಿಗಳನ್ನು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರಸಭಾ ಕಂದಾಯ ಅಧಿಕಾರಿ ರಮೇಶ್ ಮಾತನಾಡಿ ಈಗಾಗಲೇ ನಗರಸಭೆ ಪೌರಕಾರ್ಮಿಕರು ಹಾಗೂ ಹೊರ ಗುತ್ತಿಗೆ ನೌಕರು ಸೇರಿದಂತೆ 44 ಮಂದಿ ಸ್ಚಚ್ಚತಾ ಕಾರ್ಮಿಕರಿದ್ದಾರೆ. ಈ ಸಿಬ್ಬಂದಿಗಳನ್ನು 11 ಕಸವಿಲೇವಾರಿ ವಾಹನಗಳಿಗೆ ತಲಾ ಒಬ್ಬರಂತೆ ನಿಯೋಜಿಸಲಾಗಿದ್ದು, ಹೆಚ್ಚಿನ ಪೌರಕಾರ್ಮಿಕರು ಕರ್ತವ್ಯಕ್ಕೆ ಗೈರು ಹಾಜರಾಗುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ಒದಗಿಸಿದ್ದ ಗುತ್ತಿಗೆದಾರ ಸಂಸ್ಥೆ ಕರಾರಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ನಗರಸಭಾ ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಮಾತನಾಡಿ, ಅ.10ನೇ ತಾರೀಕಿನ ಒಳಗೆ ಮಡಿಕೇರಿ ನಗರವನ್ನು ಸ್ವಚ್ಚಗೊಳಿಸಿಕೊಡುವಂತೆ ಪೌರಯುಕ್ತ ರಮೇಶ್‍ಗೆ ತಾಕೀತು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ, ನಗರಸಭೆಯ ಈಗಿನ ಸಿಬ್ಬಂದಿಗಳನ್ನು ಬಳಸಿಕೊಂಡು 10 ದಿನಗಳಲ್ಲಿ 23 ವಾರ್ಡ್ ಸ್ಚಚ್ಚ ಮಾಡುವುದು ಅಸಾಧ್ಯವಾಗಿದೆ. ಹೀಗಾಗಿ ಚರಂಡಿ ಕೊಳಚೆ ತೆರವು ಮತ್ತು ವಾರ್ಡ್‍ಗಳಲ್ಲಿ ಗಿಡ ಗಂಟಿ ತೆರವು ಕಾರ್ಯವನ್ನು ಗುತ್ತಿಗೆದಾರರಿಗೆ ವಹಿಸುವುದು ಸೂಕ್ತ. ಅದರ ಹಣ ಪಾವತಿಯ ಜವಾಬ್ದಾರಿಯನ್ನು ಪೌರಾಯುಕ್ತರೇ ಹೊರಬೇಕೆಂದು ಸೂಚಿಸಿದರು.
ಸದಸ್ಯ ಪಿ.ಡಿ.ಪೊನ್ನಪ್ಪ ಮಾತನಾಡಿ, ಓರ್ವ ಗುತ್ತಿಗೆದಾರನಿಗೆ ತಲಾ 3 ವಾರ್ಡ್‍ಗಳನ್ನು ಹಂಚಿಕೆ ಮಾಡಿ ಸ್ವಚ್ಚತೆ ಕಾರ್ಯನಿರ್ವಹಿಸುವ ಜವಾಬ್ದಾರಿ ವಹಿಸುವುದು ಸೂಕ್ತ ಎಂದು ಸಲಹೆ ಮಾಡಿದರು.ಇದಕ್ಕೆ ಸಭೆಯಲ್ಲಿದ್ದ ಸದಸ್ಯರು ಒಪ್ಪಿಗೆ ಸೂಚಿಸಿದರು. ಆ ಬಳಿಕ ತಲಾ 20 ಸಾವಿದಂತೆ 23 ವಾರ್ಡ್‍ಗಳ ಚರಂಡಿ ಮತ್ತು ಗಿಡ-ಗಂಟಿಗಳ ತೆರವು ಕಾರ್ಯಕ್ಕೆ ಅನುದಾನ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

See also  ಕೇರಳಕ್ಕೆ ಕಾರ್ಮಿಕರ ಅಕ್ರಮ ಸಾಗಾಟ: ವಾಹನ ವಶ  

ನಗರದ ಎಲ್ಲಾ ರಸ್ತೆಗಳನ್ನು ಯು.ಜಿ.ಡಿ ಕಾಮಗಾರಿ ಹಾಳುಗೆಡವಿದ್ದು ಅವುಗಳ ದುರಸ್ಥಿ ನಡೆಸುವಂತೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಸದಸ್ಯೆ ಶ್ರೀಮತಿ ಬಂಗೇರಾ, ಗೌಳಿಬೀದಿಯಲ್ಲಿ ಯು.ಜಿ.ಡಿ. ಕಾಮಗಾರಿಯ ಅವಾಂತರದಿಂದಾಗಿ ತಾವು ಬಿದ್ದು ಗಾಯಗೊಂಡಿರುವುದಾಗಿ ಹೇಳಿದರಲ್ಲದೇ, ಕಾಲಿಗಾದ ಗಾಯವನ್ನು ಸಭೆಯಲ್ಲಿ ಪ್ರದರ್ಶಿಸಿ ಯು.ಜಿ.ಡಿ. ಕಾಮಗಾರಿಯ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಪಿ.ಡಿ.ಪೊನ್ನಪ್ಪ ಮಾತನಾಡಿ, ಯು.ಜಿ.ಡಿ. ಕಾಮಗಾರಿಯನ್ನು ತುಂಡು ಗುತ್ತಿಗೆಯಾಗಿ ಮಾರ್ಪಡಿಸಿದ್ದು ಇದೀಗ 5ನೇ ಗುತ್ತಿಗೆದಾರ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಗುಂಡಿ ಮುಚ್ಚುವ ಕಾಮಗಾರಿ ಕೂಡ ತೀರಾ ಕಳಪೆಯಾಗಿದ್ದು, ಕೊನೆಯ ದರ್ಜೆಯ ಡಾಮರು ಬಳಸಲಾಗುತ್ತಿದೆ ಎಂದು ಆರೋಪಿಸಿದರು. ನಗರಸಭೆಯಲ್ಲಿ ನಿರ್ಣಯ ಮಾಡದೇ ಯು.ಜಿ.ಡಿ. ಕಾಮಗಾರಿಗೆ ತಡೆ ಒಡ್ಡಿದರೆ ಗುತ್ತಿಗೆದಾರನಿಗೆ ಬುದ್ದಿ ಬರುತ್ತದೆ ಎಂದು ಪಿ.ಡಿ.ಪೊನ್ನಪ್ಪ ಖಾರವಾಗಿ ಪ್ರತಿಕ್ರಿಯಿಸಿದರು.

ಸದಸ್ಯ ಕೆ.ಜೆ. ಪೀಟರ್ ಮಾತನಾಡಿ, ಯು.ಜಿ.ಡಿ ಚೇಂಬರ್‍ಗಳು ರಸ್ತೆಯ ನಡುವೆ ಉಬ್ಬಿಕೊಂಡಂತೆ ನಿರ್ಮಿಸಲಾಗಿದೆ. ಇಂತಹ ಚೇಂಬರ್‍ಗಳು ಅಪಘಾತಕ್ಕೆ ಎಡೆ ಮಾಡಿ ಕೊಡುತ್ತಿದ್ದು, ಪ್ರಾಣಹಾನಿ ಸಂಭವಿಸಿದರೆ ಯು.ಜಿ.ಡಿ ಕಾಮಗಾರಿ ನಿರ್ವಹಿಸಿದವರೇ ಹೊಣೆ ಹೊರಬೇಕೆಂದು ಎಚ್ಚರಿಸಿದರು. ಅಂತಿಮವಾಗಿ ಮಡಿಕೇರಿ ಪಟ್ಟಣದ ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಯು.ಜಿ.ಡಿ. ಕಾಮಗಾರಿಯ ಗುತ್ತಿಗೆದಾರರಿಗೆ ಸೂಚಿಸಲಾಯಿತು. ಸ್ಥಾಯಿ ಸಮಿತಿ ತುರ್ತು ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರಾದ ಸಂಗೀತಾ ಪ್ರಸನ್ನ, ವೀಣಾಕ್ಷಿ, ನಗರಸಭೆಯ ಇಂಜಿನಿಯರ್‍ಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು