News Kannada
Thursday, September 29 2022

ಕರ್ನಾಟಕ

ಮಳೆಹಾನಿ ಪರಿಹಾರ: ಸಿಎಂ ಬಳಿಗೆ ನಿಯೋಗ ತೆರಳಲು ನಗರಸಭೆ ನಿರ್ಧಾರ - 1 min read

Photo Credit :

ಮಳೆಹಾನಿ ಪರಿಹಾರ: ಸಿಎಂ ಬಳಿಗೆ ನಿಯೋಗ ತೆರಳಲು ನಗರಸಭೆ ನಿರ್ಧಾರ

ಮಡಿಕೇರಿ: ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಮಡಿಕೇರಿ ನಗರದಲ್ಲಿ ಕೂಡ ಅನೇಕರು ಮನೆಗಳನ್ನು ಕಳೆದುಕೊಂಡಿದ್ದು, ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಗೊಂದಲಗಳ ನಿವಾರಣೆಗೆ ದಸರಾ ಕಳೆದ ನಂತರ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಸಲು ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆ ನಿರ್ಧರಿಸಿದೆ.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅತಿವೃಷ್ಟಿ ಹಾನಿಯಿಂದ ಮನೆ ಕಳೆದುಕೊಂಡವರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ದೊರೆಯುತ್ತಿಲ್ಲವೆಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮಳೆಯಿಂದ ಕುಸಿದಿರುವ ಮಣ್ಣು ತೆರವು ಕಾರ್ಯಾಚರಣೆ ಸೇರಿದಂತೆ ನಗರದ ಶುಚಿತ್ವದ ಬಗ್ಗೆ ನಗರಸಭೆ ಗಮನಹರಿಸದ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಎಸ್‍ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಹಾಗೂ ಮನ್ಸೂರ್ ಮಾತನಾಡಿ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆಗಳನ್ನು ಪುನರ್ ನಿರ್ಮಿಸಿಕೊಡುವುದು ಮತ್ತು ಪರಿಹಾರ ನೀಡುವುದು ಮೊದಲ ಆದ್ಯತೆಯಾಗಬೇಕು. ಈ ಬಗ್ಗೆ ನಗರಸಭೆ ಯಾವ ರೀತಿಯ ತಯಾರಿ ಮಾಡಿಕೊಂಡಿದೆ ಎಂದು ಪ್ರಶ್ನಿಸಿದರು. 94ಸಿ ಮೂಲಕ ಅರ್ಜಿ ಸಲ್ಲಿಸಲಾಗಿದ್ದರು ಹಕ್ಕುಪತ್ರ ಸಿಗದೆ ಇರುವ ಸಂತ್ರಸ್ತರು ಮನೆಯ ಸೌಲಭ್ಯದಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ ಎಂದು ಗಮನ ಸೆಳೆದರು.

ಸದಸ್ಯ ಕೆ.ಜಿ.ಪೀಟರ್ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಕಂದಾಯ ಪಾವತಿಸುತ್ತಿರುವ ಕುಟುಂಬಗಳು ಕೂಡ ಇಂದು ಬೀದಿ ಪಾಲಾಗಿದ್ದು, ಪರಿಹಾರದ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದರು. ಮನೆ ಕಳೆದುಕೊಂಡವರಿಗೆ 50 ಸಾವಿರದಿಂದ 1 ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿದೆ. ಆದರೆ ಕೇವಲ 3, 4 ಸಾವಿರ ಪರಿಹಾರ ನೀಡಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ಆದರೆ, ಸಂಕಷ್ಟದಲ್ಲಿರುವವರು ಏನು ಮಾಡಬೇಕೆಂದು ಪ್ರಶ್ನಿಸಿದರು. ಪರಿಹಾರ ವಿತರಣಾ ಕ್ರಮದ ಕುರಿತು ಮರು ಪರಿಶೀಲನೆ ನಡೆಸಬೇಕೆಂದು ಅವರು ಹೇಳಿದರು.

ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಮಾತನಾಡಿ, ಅತಿವೃಷ್ಟಿಯಿಂದ ಮಡಿಕೇರಿ ನಗರ ಸಂಕಷ್ಟದಲ್ಲಿದ್ದು, ಸಂತ್ರಸ್ತರಿಗೆ ಪರಿಹಾರ ವಿತರಿಸುವ ಸಂದರ್ಭ ಗೊಂದಲ ಉಂಟಾಗಿದೆ. ಇದರ ನಿವಾರಣೆಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬ ಫಲಾನುಭವಿಗಳಿಗು ಪರಿಹಾರ ನೀಡಬೇಕು. ಈ ಕುರಿತು ಒಮ್ಮತದ ತೀರ್ಮಾನದ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಬಿಜೆಪಿ ಸದಸ್ಯ ಪಿ.ಡಿ.ಪೊನ್ನಪ್ಪ ಮಾತನಾಡಿದ, ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳುವ ಬಗ್ಗೆ ಆಡಳಿತ ಮಂಡಳಿಗೆ ಯಾವುದೇ ಕಾಳಜಿ ಇಲ್ಲ. ಕಾಟಾಚಾರಕ್ಕೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆಯಷ್ಟೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ದಸರಾ ಕಳೆದ ನಂತರ ಶಾಸಕರು ಹಾಗೂ ಅಧಿಕಾರಿಗಳ ವಿಶೇಷ ಸಭೆ ನಡೆಸಿ ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲಾಗುವುದು ಮತ್ತು ಸರ್ಕಾರದ ಬಳಿಗೆ ನಿಯೋಗ ತೆರಳಲಾಗುವುದೆಂದು ಭರವಸೆ ನೀಡಿದರು.

See also  ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು