ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎಚ್1ಎನ್1 ಮಾರಕ ರೋಗಕ್ಕೆ ಈಗಾಗಲೇ ಇಬ್ಬರು ಬಲಿಯಾಗಿದ್ದು ಮೂವರಲ್ಲಿ ರೋಗ ಇರುವುದು ಪತ್ತೆಯಾಗಿದೆ ಎಂದು ಡಿಎಚ್ ಒ ಡಾ.ಅಶೋಕ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿಯಿಂದ ಈವರೆಗೆ 25 ಶಂಕಿತ ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಹಳಿಯಾಳ ವ್ಯಾಪ್ತಿಯಲ್ಲಿ ಮೂವರು, ಯಲ್ಲಾಪುರ, ಮುಂಡಗೋಡದಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಯಲ್ಲಾಪುರ ಹಾಗೂ ಮುಂಡಗೋಡದ ಇಬ್ಬರು ಸೋಂಕಿತರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಪ್ರಕರಣದಿಂದಾಗಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲಾ ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧ ದಾಸ್ತಾನಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶೀತ, ಜ್ವರ, ಕೆಮ್ಮು, ಮೂಗಿನ ಸೋರುವಿಕೆ, ತಲೆನೋವು, ಮೈ ಕೈ ನೋವು, ಚಳಿ ಮತ್ತು ಸುಸ್ತು ಇತ್ಯಾದಿ ಎಚ್1 ಎನ್1 ಸೋಂಕಿನ ಲಕ್ಷಣಗಳಾಗಿವೆ. ಆರೋಗ್ಯವಂತ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದರಿಂದ ಈ ಜ್ವರ ಕಾಣಿಸಿಕೊಂಡರೂ ಮಾರಣಾಂತಿಕವಲ್ಲ. ಆದರೆ ಜ್ವರ ನಿರ್ಲಕ್ಷಿಸದೆ ತಕ್ಷಣ ಯಾವ ಜ್ವರವೆಂದು ಖಚಿತಪಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಬಗ್ಗೆ ಜನ ಜಾಗೃತಿ ಅತಿ ಮುಖ್ಯ ಎಂದು ತಿಳಿಸಿದರು