News Kannada
Friday, December 09 2022

ಕರ್ನಾಟಕ

ಮಡಿಕೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

Photo Credit :

ಮಡಿಕೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

ಮಡಿಕೇರಿ: ಕನ್ನಡಾಭಿಮಾನ ಎನ್ನುವುದು ಸ್ವಾಭಿಮಾನವಾಗಿ ಪರಿವರ್ತನೆಯಾಗುವವರೆಗೆ ಕನ್ನಡ ಹಾಗೂ ಕನ್ನಡಿಗರ ಸಮಸ್ಯೆಗಳು ಹಾಗೆಯೇ ಉಳಿದು ಬಿಡುವ ಆತಂಕವಿದೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತದ ವತಿಯಿಂದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನದ ಪರಿವೀಕ್ಷಣೆ ನಡೆಸಿ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದ ಅವರು, ನವೆಂಬರ್ ತಿಂಗಳಿಗೆ ಮಾತ್ರ ನಾವು ಕನ್ನಡಿಗರೆನಿಸಿಕೊಳ್ಳದೆ, ಪ್ರತಿಕ್ಷಣವು ನಾವು ಕನ್ನಡಿಗರಾದರೆ ಮಾತ್ರ ನಾಡು ಸಮೃದ್ಧಿಯನ್ನು ಕಾಣಲು ಸಾಧ್ಯವೆಂದು ಸಚಿವರು ಹೇಳಿದರು. 

ಇಂಗ್ಲೀಷ್ ಭಾಷೆಯ ಪ್ರಾಬಲ್ಯದಿಂದ ಕರ್ನಾಟಕದಲ್ಲಿ ಕನ್ನಡ ಬಲ್ಲವರ ಸಂಖ್ಯೆ ಕುಸಿಯುತ್ತಿದೆಯಾದರೆ, ಕನ್ನಡ ಮಾತ್ರ ಬಲ್ಲವನು ಕೀಳರಿಮೆಯಿಂದ ತಲೆ ತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆಯೆಂದು ಬೇಸರದ ಸಂಗತಿ. ಕನ್ನಡ ಭಾಷೆಯ ಬಳಕೆ ಸಂಪೂರ್ಣವಾಗಿ ನಡೆಯಬೇಕೆನ್ನುವುದು ನಿರಂತರ ಪ್ರಕ್ರಿಯೆಯೆಂದು ತಿಳಿಸಿದರು.

ಮಹಾತ್ಮಾಗಾಂಧೀಜಿ ಅವರು ಹೇಳಿದಂತೆ ‘ಬೇರೆ ಸಂಸ್ಕಸ್ಕೃತಿಯನ್ನು ಪ್ರೀತಿಸು, ನಮ್ಮ ಸಂಸ್ಕೃತಿಯಲ್ಲಿ ಜೀವಿಸು’ ಎನ್ನುವಂತೆ ಕನ್ನಡ ಭಾಷೆಯೊಂದಿಗೆ ಇತರ ಭಾಷೆಗಳನ್ನು ಕಲಿಯಬೇಕೆಂದು ಕರೆ ನೀಡಿದ ಸಚಿವರು, ಕನ್ನಡ ನಾಡು, ನುಡಿಗೆ ತನ್ನದೇ ಆದ ಸೌಂದರ್ಯವಿದ್ದು, ಇಂತಹ ಕನ್ನಡದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದರು.

ಜಾಗತೀಕರಣದ ಪ್ರಭಾವದಿಂದಾಗಿ 21 ನೇ ಶತಮಾನದಲ್ಲಿ ಕನ್ನಡ ನಾಡು-ನುಡಿ ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗುತ್ತಿದೆ. ಜ್ಞಾನ ಹಾಗೂ ತಂತ್ರಜ್ಞಾನ ಸಂಬಂಧಿ ಮಾಹಿತಿಗಳು ಕನ್ನಡಿಗರಿಗೆ ಕನ್ನಡದಲ್ಲೆ ಅವಶ್ಯಕವಾಗಿ ದೊರೆಯುವಂತೆ ಮಾಡಬೇಕು. ಆರ್ಥಿಕವಾಗಿ ಕನ್ನಡಿಗರು ಮತ್ತಷ್ಟು ಬಲಿಷ್ಠರಾಗಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದಕ್ಕೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹರಿದು ಬಂದ ನೆರವಿನ ಮಹಾಪೂರವೇ ಉತ್ಕೃಷ್ಟ ಉದಾಹರಣೆಯಾಗಿದೆ. ಎಲ್ಲಿಯವರೆಗೆ ಕನ್ನಡಾಭಿಮಾನ ಜನಜೀವನವನ್ನು ತುಂಬಿಕೊಳ್ಳುವುದಿಲ್ಲವೋ, ಅದು ಸ್ವಾಭಿಮಾನವಾಗಿ ಪರಿವರ್ತನೆಯಾಗುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಹಾಗೂ ಕನ್ನಡಿಗರ ಸಮಸ್ಯೆಗಳು ಹಾಗೆಯೇ ಉಳಿದುಕೊಳ್ಳುತ್ತದೆ. ನವೆಂಬರ್ ಮಾಹೆಯಂದು ಮಾತ್ರ ಕನ್ನಡಿಗರಾಗದೇ ಪ್ರತಿಕ್ಷಣವೂ ನಾವು ಕನ್ನಡಿಗರಾದರೇ ಮಾತ್ರ ನಾಡು ಸಮೃದ್ಧಿಯಾಗಿ ಸುಭಿಕ್ಷವಾಗಬಲ್ಲದು ಎಂದರು.

ಮುಂಗಾರಿನ ಪ್ರಾಕೃತಿಕ ವಿಕೋಪದಿಂದ ಕೊಡಗಿನಲ್ಲಿ ಪ್ರವಾಹ ಮತ್ತು ಗುಡ್ಡ ಕುಸಿತಗಳಿಂದ ಮನೆ ಮಠಗಳನ್ನು ಕಳೆದುಕೊಂಡ ಸಂತ್ರಸ್ತರ ನೆರವಿಗೆ ಕರ್ನಾಟಕ ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ. ಕೊಡಗು ಜಿಲ್ಲೆಯ ಪುನರ್ ನಿರ್ಮಾಣ ರಾಜ್ಯ ಸರ್ಕಾರದ ಧ್ಯೇಯವಾಗಿದೆಯೆಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಶಾಸಕರುಗಳಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್, ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿವೈಎಸ್‍ಪಿ ಸುಂದರರಾಜ್ ಮತ್ತಿತರರು ಹಾಜರಿದ್ದರು.ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಪ್ರದರ್ಶನ ಮಾಡಿದ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷವಾಗಿತ್ತು, ನಗರಸಭೆ ವತಿಯಿಂದ ನಿರ್ಮಾಣ ಮಾಡಲಾಗಿದ್ದ ಸ್ತಬ್ದಚಿತ್ರ ಆಕರ್ಷಣಿಯವಾಗಿತ್ತು.

See also  ಚಿಕ್ಕಮಗಳೂರಿನಲ್ಲಿ ರಸ್ತೆ ದಾಟುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ: ಗಂಭೀರ ಗಾಯ

ಸನ್ಮಾನ-ಬಹುಮಾನ: ದೆಹಲಿಯ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಂಡ ಮಡಿಕೇರಿಯ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳಾದ ಜೋವಿನ್ ಜೋಸೆಫ್ ಮತ್ತು ಕೃತೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾದ ಭಾಗಮಂಡಲ, ಪಾಲಿಬೆಟ್ಟ ಮತ್ತು ಹೆಬ್ಬಾಲೆ ಗ್ರಾಪಂಗಳ ಅಧ್ಯಕ್ಷರುಗಳಾದ ಸುಮಿತ್ರ, ಪುಲಿಯಂಡ ಬೋಪಣ್ಣ ಮತ್ತು ಲತಾ ಹಾಗೂ ಪಿಡಿಒಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿತ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯಧಿಕ ಅಂಕ ಗಣಿಸಿದ ವರಿಷ್ಮಾ, ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಗ್ರೀಷ್ಮಾ ಮತ್ತು ವಾಣಿಜ್ಯ ವಿಭಾಗದಲ್ಲಿ ಅಧಿಕ ಅಂಕ ಪಡೆದ ರಂಜಿತಾ ಅವರಿಗೆ ವಿಶೇಷ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಆಕರ್ಷಕ ಪಥ ಸಂಚಲನ: ಕನ್ನಡ ರಾಜ್ಯತ್ಸವ ಸಮಾರಂಭದಲ್ಲಿ ನಡೆದ ಆಕರ್ಷಕ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದ ಸಂತ ಮೈಕೆಲರ ಶಾಲೆಯ ಸೇವಾದಳ, ದ್ವಿತೀಯ ಸ್ಥಾನ ಪಡೆದ ಸಂತ ಜೋಸೆಫರ ಶಾಲೆಯ ಗೈಡ್ಸ್ ತಂಡ ಹಾಗೂ ತೃತೀಯ ಸ್ಥಾನ ಪಡೆದ ಸರಕಾರಿ ಪದವಿ ಪೂರ್ವ ಕಾಲೇಜಿನ ಸೇವಾದಳ ತಂಡಕ್ಕೆ ಬಹುಮಾನಗಳನ್ನು ಅತಿಥಿ ಗಣ್ಯರು ವಿತರಿಸಿದರು.

ಪಥ ಸಂಚಲನದಲ್ಲಿ ಪಾಲ್ಗೊಂಡ ಸ್ತಬ್ಧ ಚಿತ್ರಗಳ ಪೈಕಿ ಮಡಿಕೇರಿ ನಗರಸಭೆಯ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಕ್ರಮಗಳು ಸ್ತಬ್ಧ ಚಿತ್ರಕ್ಕೆ ಪ್ರಥಮ, ಮಡಿಕೇರಿ ತಾಲ್ಲೂಕು ಪಂಚಾಯ್ತಿಯ ಗ್ರಾಮೀಣ ಉದ್ಯೋಗ ಖಾತರಿ ಕುರಿತ ಸ್ತಬ್ಧ ಚಿತ್ರಕ್ಕೆ ದ್ವಿತೀಯ ಹಾಗೂ ಜಿಲ್ಲಾ ಪಂಚಾಯ್ತಿಯ ಸ್ವಚ್ಛ ಭಾರತ್ ಮಿಷನ್ ಸ್ತಬ್ಧ ಚಿತ್ರಕ್ಕೆ ತೃತೀಯ ಬಹುಮಾನವನ್ನು ನೀಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು