ರಾಮನಗರ: ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಮತದಾನ ಪ್ರಕ್ರಿಯೆ ಬೆಳಗ್ಗೆಯಿಂದಲೂ ನೀರಸವಾಗಿತ್ತು. ಆದರೆ ಸಂಜೆ 5 ಗಂಟೆ ವೇಳೆಗೆ ಶೇ.50ರಷ್ಟಿದ್ದ ಅಂಕಿ-ಅಂಶ 6 ಗಂಟೆಯ ಸಮಯಕ್ಕೆ ಶೇ.72ಕ್ಕೂ ಹೆಚ್ಚು ಮತದಾನವಾಗಿದೆ, ಮತದಾರರೇ ಇಲ್ಲದ ಬೂತ್ಗಳಲ್ಲಿ ಕೇವಲ ಒಂದು ಗಂಟೆಯ ಅವಧಿಯಲ್ಲಿ ಶೇ.20 ರಷ್ಟು ಮತದಾನವಾಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಮತದಾನದ ಕೊನೆಯ ಗಳಿಗೆಯಲ್ಲಿ ಹಾರೊಹಳ್ಳಿ ಮರಳವಾಡಿ ಹೋಬಳಿ ಭಾಗದಲ್ಲಿ ಕನಕಪುರದಿಂದ ಬಂದ ಕೆಲವರು ಬೋಗಸ್ ಮತ ಹಾಕಿರುವುದಾಗಿ ಮಾಹಿತಿ ಇದೆ. ಶನಿವಾರ ನಡೆದ ಮತದಾನ ನ್ಯಾಯಯುತವಾಗಿ ನಡೆದಿಲ್ಲ, ಗೂಂಡಾಗಿರಿ ಚುನಾವಣೆಯಾಗಿದೆ. ಇದರಿಂದಾಗಿ ತಮಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ ಎಂದು ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಗೆಲುವನ್ನು ಮತ್ತು ಮುಖ್ಯಮಂತ್ರಿ ಆಗಿರುವುದನ್ನು ದೈವೀಚ್ಚೆ ಎಂದಿದ್ದಾರೆ. ಆದರೆ ಉಪಚುನಾವಣೆ ಮತದಾನಕ್ಕೆ ಎರಡು ದಿನ ಇದ್ದಾಗ ತಮ್ಮ ಪಕ್ಷದ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಣದಿಂದ ಹೊರ ನಡೆದಿರುವುದರ ಹಿಂದೆ ಎಷ್ಟು ಡೀಲ್ ಆಗಿದೆ? ಇದು ಸಹ ದೈವೇಚ್ಚೆಯೇ ಎಂದು ಪ್ರಶ್ನಿಸಿದರು.
ಕ್ಷೇತ್ರದ ಮತದಾರರು ಉಪಚುನಾವಣೆಯಲ್ಲಿ ಬಿಜೆಪಿ ಪರ ಮತ ಚಲಾಯಿಸಲು ಮನಸ್ಸು ಮಾಡಿದ್ದರು. ಎಚ್.ಡಿ.ಕುಮಾರಸ್ವಾಮಿ ಅಥವಾ ಡಿ.ಕೆ.ಶಿವಕುಮಾರ್ ಅವರ ಪಕ್ಷಗಳ ಮೈತ್ರಿ ಅಭ್ಯರ್ಥಿ ಬಗ್ಗೆ ವಿಶ್ವಾಸ ಇರಲಿಲ್ಲ. ಆದರೆ ಎಲ್.ಚಂದ್ರಶೇಖರ್ ಅವರನ್ನು ಕಣದಿಂದ ಹಿಂದಕ್ಕೆ ಸರಿಸಿ ಉಭಯ ಪಕ್ಷಗಳು ಜನರ ಭಾವನೆಗಳ ಜೊತೆ ಚೆಲ್ಲಾಟವಾಡಿವೆ. ಬಲವಂತವಾಗಿ ಜನರಿಂದ ಮತ ಹಾಕಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.