ಕಾಸರಗೋಡು: ಶಬರಿಮಲೆ ಆಚಾರ-ಅನುಷ್ಠಾನಗಳನ್ನು ಸಂರಕ್ಷಿಸಬೇಕು, ಅಯ್ಯಪ್ಪ ವ್ರತಧಾರಿಗಳನ್ನು ಸುಳ್ಳು ಮೊಕದ್ದಮೆಯಲ್ಲಿ ಸಿಲುಕಿಸಿ ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಎನ್.ಡಿ.ಎ. ಮತ್ತು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಭಕ್ತರ ಸಂರಕ್ಷಣಾ ಯಾತ್ರೆ ನಾಳೆ ಕಾಸರಗೋಡಿನಿಂದ ಪ್ರಯಾಣ ಬೆಳೆಸಲಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ ಮತ್ತು ತುಷಾರ್ ವೆಳ್ಳಾಪಳ್ಳಿ ನೇತೃತ್ವದ ಶಬರಿಮಲೆ ಸಂರಕ್ಷಣಾ ಯಾತ್ರೆಗೆ ನಾಳೆ ಬೆಳಿಗ್ಗೆ ಮಧೂರು ಶ್ರೀ ಸಿದ್ದಿವಿನಾಯಕ ಕ್ಷೇತ್ರ ಪರಿಸರದಿಂದ ಹೋರಾಡಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಕೆ. ಸುಧಾಕರನ್ ನೇತೃತ್ವದಲ್ಲಿ ಭಕ್ತರ ಸಂರಕ್ಷಣಾ ಯಾತ್ರೆ ನಾಳೆ ಸಂಜೆ ಪೆರ್ಲದಿಂದ ಪ್ರಯಾಣ ಬೆಳೆಸಲಿದೆ.
ಬಿಜೆಪಿಯ ಸಂರಕ್ಷಣಾ ಯಾತ್ರೆ ರಥಯಾತ್ರೆಗೆ ನಾಳೆ ಬೆಳಿಗ್ಗೆ ೧೦ ಗಂಟೆಗೆ ಮಧೂರಿನಲ್ಲಿ ರಥಯಾತ್ರೆಯನ್ನು ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡುವರು.
ಕರ್ನಾಟಕ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ರಾಜ್ಯಸಭಾ ಸದಸ್ಯ ಪಿ. ಮುರಳೀಧರನ್, ಕೇರಳ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಪಿ.ಸಿ. ಥೋಮಸ್, ಶಾಸಕರಾದ ಸಂಜೀವ ಮಠಂದೂರು, ದೇವದಾಸ್ ಕಾಮತ್, ಹರೀಶ್ಪೂಂಜಾ, ಅಂಗಾರ, ಮಾಜಿ ಶಾಸಕ ರಾಜನ್ ಬಾಬು, ಶಾಸಕ ಒ. ರಾಜಗೋಪಾಲ್, ಬಿಜೆಪಿ ಮುಖಂಡರಾದ ಪಿ.ಕೆ.ಕೃಷ್ಣದಾಸ್, ಸಿ.ಕೆ. ಪದ್ಮನಾಭನ್, ಕೆ. ಸುರೇಂದ್ರನ್, ಎ.ಎನ್. ರಾಧಾಕೃಷ್ಣನ್, ಶೋಭಾ ಸುರೇಂದ್ರನ್, ಎಂ.ಟಿ. ರಮೇಶ್ ಮೊದ ಲಾದವರು ಪಾಲ್ಗೊಳ್ಳುವರು. ಈ ರಥಯಾತ್ರೆ ಹಲವು ಜಿಲ್ಲೆಗಳಲ್ಲಿ ಪರ್ಯಟನೆ ನಡೆಸಿದ ಬಳಿಕ ನ. ೧೩ರಂದು ಪತ್ತನಂತಿಟ್ಟ ದಲ್ಲಿ ಕೊನೆಗೊಳ್ಳಲಿದೆ.
ಕೆ. ಸುಧಾಕರನ್ರ ನೇತೃತ್ವದಲ್ಲಿ ನಾಳೆ ಅಪರಾಹ್ನ ೩.೩೦ಕ್ಕೆ ಆರಂಭಗೊಳ್ಳುವ ಕಾಂಗ್ರೆಸ್ನ ವಿಶ್ವಾಸ ಸಂರಕ್ಷಣಾ ಯಾತ್ರೆಯನ್ನು ಕಾಂಗ್ರೆಸ್ನ ಮಾಜಿ ರಾಜ್ಯ ಅಧ್ಯಕ್ಷ ಎಂ.ಎಂ. ಹಸ್ಸನ್ ಉದ್ಘಾಟಿಸುವರು. ಸತೀಶನ್ ಪಾಚೇನಿ, ಇಂಟಕ್ ಮುಖಂಡ ಸುರೇಂದ್ರನ್, ಶಾಸಕ ಪಿ .ಸಿ . ವಿಶ್ವನಾಥ್, ಎಣ್ಮಕಜೆ ಪಂಚಾಯತ್ನ ಮಾಜಿ ಅಧ್ಯಕ್ಷ ಸೋಮಶೇಖರ ಕೆ.ಎಸ್.ಉಪಸ್ಥಿತರಿರುವರು. ಯಾತ್ರೆ ನವೆಂಬರ್ ೧೫ರಂದು ಪತ್ತನಂತಿಟ್ಟದಲ್ಲಿ ಕೊನೆಗೊಳ್ಳಲಿದೆ