ಮದ್ದೂರು: ಕಾಡಾನೆಗಳ ಹಿಂಡೊಂದು ಆಹಾರ ಅರಸಿ ಬಂದು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದ ಬಳಿ ಶಿಂಷಾ ನದಿ ದಡದಲ್ಲಿ ಬೀಡು ಬಿಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಕಳೆದ ರಾತ್ರಿ ಮುತ್ತತ್ತಿ ಅರಣ್ಯದಿಂದ ಆಗಮಿಸಿದ ಮೂರು ದೊಡ್ಡ ಕಾಡಾನೆಗಳು ಹಾಗೂ ಒಂದು ಮರಿಯಾನೆ ಗ್ರಾಮದ ಹಲವು ರೈತರ ಗದ್ದೆಗೆ ನುಗ್ಗಿ ಭಾಗಶಃ ಬೆಳೆಗಳನ್ನು ನಾಶಪಡಿಸಿವೆ. ಕಾಡಿಗೆ ಹಿಂದಿರುವ ವೇಳೆಗೆ ಬೆಳಕು ಹರಿದ ಪರಿಣಾಮ ಕಾಡಿಗೆ ಹೋಗದೆ, ಶಿಂಷಾನದಿಗೆ ಇಳಿದು ಜಲಕ್ರೀಡೆಯಾಡಿದವು.
ಆನೆಗಳು ಬಂದಿರುವ ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಗಳ ಜನರು ಗುಂಪು ಗುಂಪಾಗಿ ಆಗಮಿಸಿ ಕಾಡಾನೆಗಳನ್ನು ವೀಕ್ಷಿಸಿದರು. ಅಷ್ಟರಲ್ಲಿ ಸುದ್ದಿ ತಿಳಿದ ಪೊಲೀಸರು ಹಾಗೂ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಆಗಮಿಸಿ ಜನರನ್ನು ದೂರ ತೆರಳುವಂತೆ ಸೂಚಿಸಿದರು.
ಮುತ್ತತ್ತಿ ಅರಣ್ಯ ವ್ಯಾಪ್ತಿಯಿಂದ ಆಹಾರ ಅರಸಿ ಕಾಡಾನೆಗಳು ಬಂದಿವೆ. ಸಂಜೆ ವೇಳೆಗೆ ಕಾಡಿಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಲಯ ಅರಣ್ಯಾಧಿಕಾರಿ ಡಾ.ಶಶಿಧರ್ ತಿಳಿಸಿದರು. ಕಾಡಾನೆಗಳು ರೈತರ ಬೆಳೆಗಳನ್ನು ನಾಶ ಪಡಿಸಿದ್ದು, ಈ ಕೂಡಲೇ ಅಧಿಕಾರಿಗಳು ನಷ್ಟವನ್ನು ಅಂದಾಜಿಸಿ ತಕ್ಷಣವೇ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.