ಕಾರವಾರ: ಕೇಂದ್ರ ಸರಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಮಿತಾಬ್ ಗೌತಮ್ ನೇತೃತ್ವದ ಬರ ಅಧ್ಯಯನ ತಂಡವು ನ.17ರಿಂದ 19ರವರೆಗೆ ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದೆ ಎಂದು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಬುಧವಾರ ತಿಳಿಸಿದ್ದಾರೆ.
ಈ ಬಗ್ಗೆ ವಿವರ ಮಾಹಿತಿ ನೀಡಿರುವ ಅವರು ಒಟ್ಟು 10 ಸದಸ್ಯರಿರುವ ಈ ತಂಡವು ಮೂರು ಉಪ ತಂಡಗಳಾಗಿ ರಾಜ್ಯದ ನಾನಾ ಭಾಗಗಳಿಗೆ ಭೇಟಿ ನೀಡಲಿವೆ. ಗೌತಮ್ ಅವರ ನೇತೃತ್ವದ ಮೊದಲನೇ ತಂಡವು ಮೊದಲ ದಿನವಾದ 17ರಂದು ಯಾದಗಿರಿ, ರಾಯಚೂರು, ಎರಡನೇ ದಿನವಾದ 18ರಂದು ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಈ ಜಿಲ್ಲೆಗಳಲ್ಲಿ ಬರಪೀಡಿತ ಸ್ಥಳಗಳಿಗೆ ತೆರಳಲಿದೆ ಎಂದಿದ್ದಾರೆ.
ಇದೇ ರೀತಿಯಲ್ಲಿ ಡಾ. ಮಹೇಶ್ ನೇತೃತ್ವದ ಎರಡನೇ ತಂಡವು ಈ ಅವಧಿಯಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಗದಗ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಹಾಗೆಯೇ, ಮಾನಸ್ ಚೌಧರಿ ನೇತೃತ್ವದ ಮೂರನೇ ತಂಡವು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ತೆರಳಲಿದೆ.
ಕೇಂದ್ರದ ಈ ಅಂತರ್-ಸಚಿವಾಲಯ ತಂಡವು ತಮ್ಮ ಜಿಲ್ಲೆಗಳಿಗೆ ಬಂದಾಗ, ಆಯಾ ಭಾಗದ ಜನಪ್ರತಿನಿಧಿಗಳು ಬರ ಮತ್ತು ಅದರಿಂದಾಗಿರುವ ಹಾನಿ/ನಷ್ಟದ ಬಗ್ಗೆ ತಂಡದ ಸದಸ್ಯರಿಗೆ ಸೂಕ್ತ ಮಾಹಿತಿ ನೀಡಬಹುದು ಎಂದು ದೇಶಪಾಂಡೆ ಹೇಳಿದ್ದಾರೆ. ರಾಜ್ಯದಲ್ಲಿ ಈಗಾಗಲೇ 100 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಅಲ್ಲದೆ, ಅಕ್ಟೋಬರ್ 30ರಂದು ತಾವು ಮತ್ತು ಕೃಷಿ ಸಚಿವ ಎನ್. ಎಚ್. ಶಿವಶಂಕರ ರೆಡ್ಡಿದೆಹಲಿಗೆ ಹೋಗಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಬರ ಪರಿಸ್ಥಿತಿಯನ್ನು ನಿಭಾಯಿಸಲು ಎನ್.ಡಿ.ಆರ್.ಎಫ್ ನಿಧಿಯಿಂದ 2,434 ಕೋಟಿ ರೂ.ಗಳನ್ನು ಪರಿಹಾರವಾಗಿ ಒದಗಿಸಲು ಮನವಿ ಸಲ್ಲಿಸಿದ್ದೆವು. ಈ ಸಂದರ್ಭದಲ್ಲಿ ಬರದಿಂದಾಗಿ ಒಟ್ಟು 16,662 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ನಷ್ಟ ರಾಜ್ಯದಲ್ಲಿ ಸಂಭವಿಸಿರುವುದನ್ನು ಸಿಂಗ್ ಅವರ ಗಮನಕ್ಕೆ ತಂದಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.