ಕಾಸರಗೋಡು: ನಿವೃತ್ತ ಬ್ಯಾಂಕ್ ಮ್ಯಾನೇಜರ್ ಓರ್ವರನ್ನು ಸಂಬಂಧಿಕರಾದ ಪೊಲೀಸ್ ಕಾನ್ಸ್ ಟೇಬಲ್ ಇರಿದು ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ಅದೂರು ಠಾಣಾ ವ್ಯಾಪ್ತಿಯ ಕಾರಡ್ಕದಲ್ಲಿ ನಡೆದಿದೆ.
ಕೊಲೆಗೀಡಾದವರನ್ನು ಕಾರಡ್ಕ ಶಾಂತಿನಗರದ ಮಾಧವನ್ ನಾಯರ್(59) ಎಂದು ಗುರುತಿಸಲಾಗಿದೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ಮಾಧವನ್ ನಾಯರ್ ಅವರ ಪತ್ನಿ ಸಹೋದರಿ ಪುತ್ರ, ಕಾಸರಗೋಡು ನಗರ ಠಾಣಾ ಕಾನ್ಸ್ ಟೇಬಲ್ ಶ್ಯಾಮ್(27) ಎಂಬಾತನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಮಧ್ಯಾಹ್ನ ಮನೆಗೆ ಬಂದ ಈತ ಮಾಧವನ್ ನಾಯರ್ ರನ್ನು ಇರಿದಿದ್ದು, ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ಮಾಧವನ್ ನಾಯರ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯಿಂದ ಪರಾರಿಯಾಗಲೆತ್ನಿಸಿದ ಶ್ಯಾಮ್ ನನ್ನು ಸ್ಥಳೀಯರು ಹಿಡಿದು ಬಳಿಕ ಪೊಲೀಸರಿಗೊಪ್ಪಿಸಿದರು.
ಗಂಭೀರ ಸ್ಥಿತಿಯಲ್ಲಿದ್ದ ಮಾಧವನ್ ನಾಯರ್ ರನ್ನು ಕಾಸರಗೋಡು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.
ಆಸ್ತಿ ವಿವಾದ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಬ್ಬರ ನಡುವೆ ಈ ಹಿಂದೆ ಆಸ್ತಿಗಾಗಿ ಜಗಳವಾಗಿತ್ತು ಎನ್ನಲಾಗಿದೆ. ಕೊಲೆಗೀಡಾದ ಮಾಧವನ್ ನಾಯರ್ ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್ ಮೆನೇಜರ್ ಆಗಿ ದುಡಿದು ನಿವೃತ್ತರಾಗಿದ್ದರು.
ಮೃತದೇಹವನ್ನು ಕಾಸರಗೋಡು ಜನರಲ್ ಅಸ್ಪತ್ರೆಯಲ್ಲಿ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.