ಮಡಿಕೇರಿ: ಅಯೋಧ್ಯೆಯ ಶ್ರೀ ರಾಮ ಜನ್ಮಸ್ಥಾನದಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಸೂದೆ ಮಂಡಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವ ಸಲುವಾಗಿ ಡಿ.1ರಂದು ಮಡಿಕೇರಿಯಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ವಿಶ್ವಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಅಪರಾಹ್ನ 2ಗಂಟೆಗೆ ನಗರದ ಬನ್ನಿಮಂಟಪದ ಬಳಿಯಿಂದ ಗಾಂಧಿ ಮೈದಾನದವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಬಳಿಕ ಸಂಜೆ 4ಗಂಟೆಗೆ ಗಾಂಧಿ ಮೈದಾನದಲ್ಲಿ ಜನಾಗ್ರಹ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಸಭೆಯಲ್ಲಿ ಗುರುಪುರ ವಜ್ರದೇಹಿ ಆಶ್ರಮದ ರಾಜಶೇಖರಾನಂದ ಸ್ವಾಮೀಜಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಜಿಲ್ಲೆಯ ಎಲ್ಲಾ ಮಠಗಳ ಸಾಧುಸಂತರು ಭಾಗವಹಿಸಿ ಅಶೀರ್ವಚನ ನೀಡಲಿದ್ದಾರೆ. ರಾಮ ಜನ್ಮಭೂಮಿಯಲ್ಲಿ ಭವ್ಯಮಂದಿರ ನಿರ್ಮಿಸುವುದು ಈ ದೇಶದ ಬಹುಸಂಖ್ಯಾತ ಹಿಂದೂಗಳ ಹಲವು ದಶಕಗಳ ಕನಸಾಗಿದ್ದು, ಇದಕ್ಕಾಗಿ 1527ರಿಂದಲೂ ಸಾಕಷ್ಟು ಹೋರಾಟಗಳು ನಡೆದಿವೆ. ಅದರಲ್ಲಿ ಸುಮಾರು 73ಕ್ಕೂ ಅಧಿಕ ಬೃಹತ್ ಹೋರಾಟಗಳು ನಡೆದಿದ್ದು, ಹಲವಾರು ಮಂದಿಯ ಬಲಿದಾನವಾಗಿದೆ.1984ರಿಂದ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಹೋರಾಟವನ್ನು ವಿಶ್ವಹಿಂದೂ ಪರಿಷದ್ ಕೈಗೆತ್ತಿಕೊಂಡಿದ್ದು, ಆ ಬಳಿಕ 1990ರಲ್ಲಿ ದೇಶದ ಮೂಲೆಮೂಲೆಗಳಿಂದ ಪೂಜಿಸಲ್ಪಟ್ಟ ಇಟ್ಟಿಗೆಗಳನ್ನು ಸಂಗ್ರಹಿಸಲಾಗಿದ್ದು, ಬಾಬರಿ ಮಸೀದಿಯನ್ನು 1992ರಲ್ಲಿ ಕರಸೇವೆಯ ಮೂಲಕ ಕೆಡವಲಾಗಿದೆ.
ಕಳೆದ 28 ವರ್ಷಗಳಿಂದ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಅಯೋಧ್ಯೆ ವಿವಾದ ಇತ್ಯರ್ಥವಾಗಿ ಭವ್ಯ ಮಂದಿರ ನಿರ್ಮಾಣದ ಕನಸ್ಸು ಸಾಕಾರಗೊಳ್ಳುವುದೆಂಬ ಹಿಂದೂಗಳ ಆಶಯ ಹುಸಿಯಾಗಿದೆ ಎಂದು ನರಸಿಂಹ ವಿಷಾದಿಸಿದರು. ನವೆಂಬರ್ ತಿಂಗಳಿನಲ್ಲಿ ಈ ವಿವಾದ ಇತ್ಯರ್ಥಗೊಳ್ಳುವ ವಿಶ್ವಾಸವಿತ್ತಾದರೂ, ಇದು ಆದ್ಯತೆಯ ವಿಷಯವಲ್ಲ ಎಂಬ ಕಾರಣ ನೀಡಿ ನ್ಯಾಯಾಲಯ ರಾಮಜನ್ಮಭೂಮಿ ವಿವಾದದ ವಿಚಾರಣೆಯನ್ನು ಜನವರಿಗೆ ಮುಂದೂಡುವ ಮೂಲಕ ದಶದ ಬಹುಸಂಖ್ಯಾತ ಹಿಂದೂಗಳಿಗೆ ನಿರಾಸೆ ಉಂಟು ಮಾಡಿದೆ ಎಂದು ಹೇಳಿದರು.
ದೇಶದ ಬಹುಕೋಟಿ ಹಿಂದೂಗಳ ಧಾರ್ಮಿಕ ಭಾವನೆಯೊಂದಿಗೆ ಭಕ್ತಿಯ ಪ್ರತೀಕವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಮಾಡಲು ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಆಗ್ರಹಿಸುವ ಸಲುವಾಗಿ ವಿಶ್ವಹಿಂದೂ ಪರಿಷದ್ ದೇಶದಾದ್ಯಂತ ಮತ್ತೊಂದು ಆಂದೋಲನವನ್ನು ರೂಪಿಸಿದೆ ಎಂದರು.
ಅದರಂತೆ ದೇಶದ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಬೃಹತ್ ಜನಾಗ್ರಹ ಸಭೆಗಳನ್ನು ಆಯೋಜಿಸುವ ಮೂಲಕ ಆಯಾ ಕ್ಷೇತ್ರದ ಸಂಸದರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದಲ್ಲದೆ, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ಸಂಬಂಧವಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ಸಂಸದರ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಈ ಬಾರಿ ಕೇಂದ್ರ ಸರಕಾರ ದೇಶದ ಬಹುಕೋಟಿ ಹಿಂದೂಗಳ ನಿರೀಕ್ಷೆಯನ್ನು ಹುಸಿಗೊಳಿಸದೆ ಸುಗ್ರೀವಾಜ್ಞೆ ಹೊರಡಿಸಲು ದೇಶದ ಎಲ್ಲಾ ಸಾಧುಸಂತರು, ಧಾರ್ಮಿಕ ಮುಖಂಡರು ಈ ಜನಾಗ್ರಹದ ಮೂಲಕ ಕೇಂದ್ರದ ಗಮನ ಸೆಳೆಯಲಿದ್ದಾರೆ. ನ್ಯಾಯಾಂಗದ ಬಗ್ಗೆ ತಮಗೆ ವಿಶ್ವಾಸವಿದ್ದರೂ, ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ಕೆಲವು ತೀರ್ಪುಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿರುವುದರಿಂದ ಸುಗ್ರಿವಾಜ್ಞೆ ಮೂಲಕ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ನರಸಿಂಹ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷದ್ ಜಿಲ್ಲಾ ಕಾಯಾಧ್ಯಕ್ಷ ಐ.ಎಂ. ಅಪ್ಪಯ್ಯ, ಬಜರಂಗದಳದ ಜಿಲ್ಲಾ ಸಂಯೋಜಕ ಕೆ.ಹೆಚ್. ಚೇತನ್, ವಿದ್ಯಾರ್ಥಿ ಪ್ರಮುಖ್ ವಿನಯ್, ಸೇವಾ ಪ್ರಮುಖ್ ಪಿ.ಜಿ.ಕಮಲ್ ಹಾಗೂ ಮಡಿಕೇರಿ ನಗರ ಸಂಯೋಜಕ ಮನು ರೈ ಉಪಸ್ಥಿತರಿದ್ದರು.