ಮೈಸೂರು: ಪಿರಿಯಾಪಟ್ಟಣದ ಅರಣ್ಯವಲಯದಲ್ಲಿ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಠಿಯಾಗಿರುವ ಹಿನ್ನಲೆಯಲ್ಲಿ ಅದರ ಪತ್ತೆಗಾಗಿ ಆನೆಗಳೊಂದಿಗೆ ಕೂಂಬಿಂಗ್ ನಡೆಸಲಾಗುತ್ತಿದೆ.
ಹುಣಸೂರು ತಾಲೂಕಿನ ಪಿರಿಯಾಪಟ್ಟಣ ವಲಯ ಅರಣ್ಯವ್ಯಾಪ್ತಿಯಲ್ಲಿ ಶೆಟ್ಟಹಳ್ಳಿ ಲಕ್ಕಪಟ್ಟಣದಲ್ಲಿ ನ.22 ರಂದು ಹುಲಿಯೊಂದು ಗ್ರಾಮದ ಅಂಚಿನಲ್ಲಿ ದನಗಾಹಿಗಳಿಗೆ ಕಾಣಿಸಿಕೊಂಡಿದ್ದು ಇದರಿಂದ ಜನರು ಭಯಭೀತರಾಗಿದ್ದರು. ಇದಲ್ಲದೆ ಜಿಲ್ಲಾಧಿಕಾರಿಗಳು ಹನಗೋಡು ಗ್ರಾಮದಲ್ಲಿ ನಡೆಸಿದ ಜನಸ್ಪಂದ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಇದಕ್ಕೂ ಮೊದಲೇ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಸಾಕಾನೆಗಳ ಸಹಾಯದಿಂದ ಕಾಡಂಚಿನಲ್ಲಿ ಕೂಂಬಿಂಗ್ ನಡೆಸಲಾಗುತ್ತಿದೆ.
ಕೊಡಗಿನ ಮತ್ತಿಗೋಡು ಅರಣ್ಯದ ವನ್ಯಜೀವಿ ವಲಯದ ಆನೆಗಳಾದ ಗಣೇಶ್ ಮತ್ತು ಬಲರಾಮ ಆನೆಗಳೊಂದಿಗೆ ಮತ್ತಿಗೋಡು ಅರಣ್ಯ ವಲಯದ ಸಿಬ್ಬಂದಿಗಳು ಹುಲಿಕಾಣಿಸಿಕೊಂಡ ಪ್ರದೇಶ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕಾಡಿನಂಚಿನ ಸ್ಥಳಲ್ಲಿ ಕೂಂಬಿಂಗ್ ಮಾಡಲಾಗುತ್ತಿದೆ.
ಕೂಂಬಿಂಗ್ ಕಾರ್ಯಾಚರಣೆಯ ವೇಳೆ ಒಂದು ದೊಡ್ಡ ಹುಲಿ ಮತ್ತು ಎರಡು ಮರಿಹುಲಿಗಳ ಹೆಜ್ಜೆಗುರುತುಗಳು ಪತ್ತೆಯಾಗಿದ್ದು, ತಾಯಿಯ ಹುಲಿ ಮರಿಹುಲಿಗಳೊಂದಿಗೆ ಆಗಮಿಸಿರಬಹುದು ಎಂದು ಅಂದಾಜಿಸಲಾಗಿದೆ.
ಹುಲಿ ಕಾರ್ಯಾಚರಣೆಯ ವೇಳೆ ಪತ್ತೆಯಾಗಿಲ್ಲದೆ ಇರುವುದರಿಂದಾಗಿ ಎಲ್ಲಡೆ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಹುಲಿ ತನ್ನ ಮರಿಗಳೊಂದಿಗೆ ಹೊರಬಂದು ವಾಪಸ್ಸ್ ಕಾಡಿಗೆ ಹೋಗಿರಬಹುದಾದ ಎಲ್ಲಾ ಸಾಧ್ಯತೆಗಳಿದ್ದು ಜನತೆ ಯಾವುದೆ ಭಯಪಡುವ ಅಗತ್ಯವಿಲ್ಲ, ಶೆಟ್ಟಹಳ್ಳಿಲಕ್ಕಪಟ್ಟಣದ ಜನತೆ ಹುಲಿ ಕಂಡುಬಂದಲ್ಲಿ ಮೊಬೈಲ್ ನಂಬರ್ 9845979535ನ್ನು ಸಂಪರ್ಕಿಸಲು ವಲಯ ಅರಣ್ಯಾಧಿಕಾರಿ ಎಂ.ಎ.ರತನ್ಕುಮಾರ್ ತಿಳಿಸಿದ್ದಾರೆ.