ಮಡಿಕೇರಿ: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾಕಷ್ಟು ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು, ಓಡಾಡಲು ತುಂಬಾ ತೊಂದರೆಯಾಗಿದ್ದು, ಆದ್ದರಿಂದ ಒಂದು ವಾರದೊಳಗೆ ಗ್ರಾಮೀಣ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸಂಬಂಧಪಟ್ಟ ಎಂಜಿನಿಯರ್ ಗೆ ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಹಾಗೂ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸೂಚನೆ ನೀಡಿದ್ದಾರೆ.
ಸದ್ಯ ಈಗ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಗ್ರಾಮೀಣ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಕಾರ್ಯವಾಗಿಲ್ಲ. ಆದ್ದರಿಂದ ಗ್ರಾಮೀಣ ರಸ್ತೆಗಳನ್ನು ಸರಿಪಡಿಸಬೇಕು. ಜೊತೆಗೆ ರಸ್ತೆ ಗುಂಡಿ ಮುಚ್ಚುವಂತೆ ಪಂಚಾಯತ್ ರಾಜ್ ಎಂಜಿನಿಯರ್ ಗೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ನಿರ್ದೇಶನ ನೀಡಿದರು.
ಸಮಿತಿ ಸದಸ್ಯರಾದ ಸುಭಾಷ್ ಸೋಮಯ್ಯ ಅವರು ಎರಡನೇ ಮೊಣ್ಣಂಗೇರಿ, ಕಾಲೂರು ಮತ್ತಿತರ ಕಡೆಗಳಲ್ಲಿ ತೋಟದ ಮನೆಗಳಿಗೆ ತೆರಳಲು ರಸ್ತೆ ಸಂಪರ್ಕವಿಲ್ಲದೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ರಸ್ತೆ ಸರಿಪಡಿಸಬೇಕು ಎಂದು ಅವರು ಮನವಿ ಮಾಡಿದರು.
ಅಡುಗೆ ಅನಿಲ ಸಂಪರ್ಕವಿಲ್ಲದ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಬೇಕು. ಹಾಗೆಯೇ ವಿದ್ಯುತ್ ಸಂಪರ್ಕವಿಲ್ಲದ ಕುಟುಂಬಗಳಿಗೆ ಸೌಭಾಗ್ಯ ಯೋಜನೆಯಡಿ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದರಾದ ಪ್ರತಾಪ್ ಸಿಂಹ ಅವರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ಮನುಮುತ್ತಪ್ಪ ಅವರು ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರಂ ಇಲ್ಲದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆದ್ದರಿಂದ ಕೋಪಟ್ಟಿ ಬಳಿ ಪೈಸಾರಿ ಜಾಗವಿದ್ದು, ಅಲ್ಲಿ 66 ಕೆ.ವಿ.ಯ ವಿದ್ಯುತ್ ಘಟಕ ಸ್ಥಾಪಿಸಿ ಆ ಭಾಗದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಜೊತೆಗೆ ನಾಪೋಕ್ಲುವಿನಲ್ಲಿ ವಿದ್ಯುತ್ ಬಿಲ್ಲು ಪಾವತಿಸುವ ಕೇಂದ್ರ ತೆರೆಯುವಂತಾಗಬೇಕು ಎಂದು ಅವರು ಮನವಿ ಮಾಡಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು 66 ಕೆ.ವಿ. ವಿದ್ಯುತ್ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕೋಪಟ್ಟಿ, ಬಾಳೆಲೆ, ಕೊಡ್ಲಿಪೇಟೆ, ಶ್ರೀಮಂಗಲ ಮತ್ತಿತರ ಕಡೆಗಳಲ್ಲಿ ಗುರುತಿಸಲಾಗಿದ್ದು, ಇಂತಹ ಕಡೆಗಳಲ್ಲಿ ಕೂಡಲೇ 66 ಕೆ.ವಿ. ವಿದ್ಯುತ್ ಘಟಕ ಸ್ಥಾಪಿಸಬೇಕು ಎಂದು ಸೆಸ್ಕ್ ಎಂಜಿನಿಯರ್ ಅವರಿಗೆ ಸೂಚನೆ ನೀಡಿದರು.