News Kannada
Sunday, September 25 2022

ಕರ್ನಾಟಕ

ಬರಡು ಭೂಮಿಯಲ್ಲಿ ಕೃಷಿ ಮಾಡಿದ ಸಾಹಸಿ ಸರ್ಕಾರಿ ಅಧಿಕಾರಿ - 1 min read

Photo Credit :

ಬರಡು ಭೂಮಿಯಲ್ಲಿ ಕೃಷಿ ಮಾಡಿದ ಸಾಹಸಿ ಸರ್ಕಾರಿ ಅಧಿಕಾರಿ

ಕಾಸರಗೋಡು: ಕೃಷಿಗೆ ಯೋಗ್ಯವೇ ಅಲ್ಲದ ಕೆಂಗಲ್ಲ ಪಾರೆಯೊಂದಿಗೆ ಲಾಟರೈಟ್ ಮಣ್ಣು ಹೊಂದಿರುವ ಪ್ರದೇಶದಲ್ಲಿ ಮನೋಬಲವನ್ನೇ ಬಂಡವಾಳವಾಗಿಸಿ ಅದ್ಭುತ ಸೃಷ್ಟಿಸಿದ ವ್ಯಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಮೊಗ್ರಾಲ್ ಪುತ್ತೂರು ಕೃಷಿಭವನದ ಅಧಿಕಾರಿಯಾಗಿರುವ ಚ್ಯವನ ನರಸಿಂಹುಲು ಈ ಸಾಧನೆ ನಡೆಸಿದವರು. ಮೂಲತಃ ಆಂಧ್ರಪ್ರದೇಶದವರಾದ ಇವರು ಕೃಷಿ ಇಲಾಖೆಯ ಸಿಬ್ಬಂದಿಯಾಗಿರುವುದರ ಜೊತೆಗೆ, ಮಣ್ಣನ್ನು ಆರಾಧಿಸುವ ಅಪ್ರತಿಮ ಕೃಷಿಕರಾಗಿ ನಮ್ಮ ಗಮನ ಸೆಳೆಯುತ್ತಾರೆ. ನಡೆಸುವ ಕಾಯಕ ಪ್ರಾಮಾಣಿಕವಾಗಿದ್ದರೆ ಕರ್ಗಲ್ಲಪಾರೆಯೂ ಹಸನುಭೂಮಿಯಾಗುವುದು ಎಂಬುದು ಚ್ಯವನ ನರಸಿಂಹುಲು ಅವರ ಅನುಭವದ ಮಾತು.

ನುಡಿದಂತೆ ನಡೆದಿರುವ ಇವರ ಮಾತುಗಳಿಗೆ ಸಹಜವಾಗಿಯೇ ಗೌರವ ಮೂಡುತ್ತದೆ. ಪರಂಪರೆಯಿಂದ ಸಹಜವಾಗಿ ಬಂದಿರುವ ಕೃಷಿ ಸಂಸ್ಕಾರಕ್ಕೆ ಗಡಿನಾಡಿನ ಜನತೆಯ ಕೃಷಿ ಪ್ರೀತಿ ಹೆಚ್ಚುವರಿ ಬಲತಂದಿದೆ ಎಂದವರು ಅಭಿಪ್ರಾಯಪಡುತ್ತಾರೆ. 1999ರಿಂದ ಗಡಿನಾಡು ಕಾಸರಗೋಡಿನಲ್ಲಿ ಶಾಶ್ವತ ನಿವಾಸಿಯಾದರು ಚ್ಯವನ.

ಕೃಷಿ ಎಂಬುದು ಉತ್ಪನ್ನಗಳನ್ನು ಬೆಳೆದು ಹಣಗಳಿಸುವ ಕಾಯಕ ಎನ್ನುವುದಕ್ಕಿಂತ ಮಿಗಿಲಾಗಿ ಕೃಷಿ ಸಂಸ್ಕಾರ ಮೂಲಕ ಒಂದು ಪ್ರದೇಶದ ಸಮಗ್ರ ಅಭಿವೃದ್ಧಿಗೆ ನಾಂದಿಯಾಗುವುದು ಎಂಬ ಸಂಕಲ್ಪದಿಂದ ಆ ಪ್ರದೇಶದಲ್ಲಿ ಸೌಹಾರ್ದತೆ, ಸಹಕಾರಿ ಮನೋಧರ್ಮದೊಂದಿಗಿನ ಬದುಕು ಸಾಧ್ಯ ಎಂಬ ವಿಚಾರ ತನ್ನನ್ನು ಪ್ರೋತ್ಸಾಹಿಸಿದೆ. ಈ ಕಾರಣಗಳಿಂದ ಕೃಷಿ ಎಂಬುದು ಉದ್ಯೋಗವಲ್ಲ, ಅದೊಂದು ಸಾಮಾಜಿಕ-ಸಾಂಸ್ಕೃತಿಕ ವ್ಯವಹಾರ ಎಂದವರು ಅಭಿಪ್ರಾಯಪಡುತ್ತಾರೆ.

ಒಂದು ಎಕ್ರೆ ಬಂಜರು ಭೂಮಿಯನ್ನು ಹಸುರಿನ ಬನಸಿರಿಯಾಗಿಸಿದ ಹೆಗ್ಗಳಿಕೆ ಚ್ಯವನರಿಗೆ ಸಲ್ಲುತ್ತದೆ. ಹರಿತೋದ್ಯಾನ ಎಂಬ ಹೆಸರಿನಲ್ಲಿ ಇವರು ಬೆಳೆದ ಕೃಷಿಯ ಕವಾಟದಿಂದ ಇವರ ನಿವಾಸದವರೆಗೆ ದಾರಿಯುದ್ದಕ್ಕೂ ಸಮೃದ್ಧ ಫಲ ನೀಡುವ ಫ್ಯಾಷನ್ ಫ್ರುಟ್ ನ ಚಪ್ಪರಗಳಿವೆ. ಫಲ ನೀಡುವ ಮರಗಳು, ತರಕಾರಿ ಬೆಳೆಗಳು, ಔಷಧ ಸಸ್ಯಗಳು, ಹೂಬಿಡುವ ಸಸಿಗಳು ಇತ್ಯಾದಿ ಇಲ್ಲಿ ನಳನಳಿಸುತ್ತಿವೆ. ನವಿಲು ಸಹಿತ ಹಕ್ಕಿಗಳು ಇವರುದ್ಯಾನದ ಶಾಶ್ವತ ಸಂದರ್ಶಕರಾಗಿದ್ದಾರೆ. ಕೃಷಿಯ ಜೊತೆಗೆ ಕೋಳಿಗಳ ಫಾರ್ಮ್, ಅಲಂಕಾರ ಹಕ್ಕಿಗಳು, ಮೀನುಗಳ ಸಾಕಣೆ ಇವರ ಇತರ ಹವ್ಯಾಸಗಳಾಗಿವೆ.

ಒಂದು ಇಂಚು ಜಾಗವನ್ನೂ ಕೃಷಿ ನಡೆಸದೇ ಬಿಡಲಾರೆ ಎಂಬುದು ತನ್ನ “ಪಾಲಿಸಿ” ಎಂದವರು ನಗುತ್ತಾರೆ. ಆಂಧ್ರಪ್ರದೇಶದ ತಿರುಪತಿ ಬಳಿಯ ರೈಲ್ವೇ ಕೋಡೂರು ಎಂಬ ಕೃಷಿ ಪ್ರಧಾನ ಗ್ರಾಮದಲ್ಲಿ 1965ರಲ್ಲಿ ನರಸಿಂಹುಲು ಜನಿಸಿದರು. ತಂದೆ ಪ್ಯಾರಯ್ಯ ಬಾಳೆಕೃಷಿಯಲ್ಲಿ ಖ್ಯಾತರಾಗಿದ್ದವರು. ಇವರು ಬೆಳೆಯುತ್ತಿದ್ದ ಬಾಳೆಗಳಲ್ಲಿ ಕ್ಯಾವೆಂಡಿಶ್ (ರೋಬಸ್ಟ್)ಹಣ್ಣುಗಳಿಗೆ ಚೆನೈ ಮತ್ತು ಬೆಂಗಳೂರಿನಲ್ಲಿ ಅಪಾರ ಬೇಡಿಕೆಗಳಿದ್ದವು. ಆರಂಭದ ಹಂತದ ಶಿಕ್ಷಣಗಳ ನಂತರ ಜಿಯಾಲಜಿ ಪದವಿ ತರಗತಿಗೆ ಸೇರಿದರೂ, ಕಾರಣಾಂತರಗಳಿಂದ ಅದನ್ನು ತೊರೆಯಬೇಕಾಗಿ ಬಂದಿತ್ತು. ನಂತರ ಭಾರತೀಯ ಕೃಷಿ ಸಂಶೋಧನೆ ಮಂಡಳಿ(ಐ.ಸಿ.ಎ.ಆರ್.)ನಲ್ಲಿ ಅಂದಿನ ಅಂತಾರಾಜ್ಯ ವಿದ್ಯಾರ್ಥಿ ವಿಮಾ ಪ್ರಕಾರ 1985ರಲ್ಲಿ ತ್ರಿಶೂರ್ ಕೇರಳ ಕೃಷಿ ವಿವಿಯಲ್ಲಿ 4 ವರ್ಷದ ಬಿ.ಎಸ್.ಸಿ.ಕೃಷಿ ಪದವಿ ಪೂರ್ಣಗೊಳಿಸಿದರು. ಇದು ತಮ್ಮ ಬದುಕಿಗೆ ಕ್ರಿಯಾತ್ಮಕ ತಿರುವು ತಂದಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ತದನಂತರ 10 ವರ್ಷ ಕಾಲ ತಮ್ಮೂರಲ್ಲಿ ಕೃಷಿಕರಾಗಿ ಮುಂದುವರಿದಿದ್ದರು. 1999ರಲ್ಲಿ ಲೋಕಸೇವಾ ಆಯೋಗ ಮೂಲಕ ಕೃಷಿ ಇಲಾಖೆಯಲ್ಲಿ ಸಿಬ್ಬಂದಿಯಾಗಿ ಸೇರ್ಪಡೆಗೊಂಡರು. ಮೊದಲ ನೇಮಕಾತಿ ಗಡಿನಾಡು ಕಾಸರಗೋಡಿನ ಕುಂಟಾರಿನಲ್ಲಿ, ನಂತರ ಚೆರ್ಕಳ, ಎಣ್ಮಕಜೆ, ಮೊಗ್ರಾಲ್ ಪುತ್ತೂರು ಪ್ರದೇಶಗಳಲ್ಲಿ ಕೃಷಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಈಗ ಮೊಗ್ರಾಲ್ ಪುತ್ತೂರು ಕೃಷಿ ಭವನದಲ್ಲಿ ಕೃಷಿ ಅಧಿಕಾರಿಯ ಪದವಿ ಅಲಂಕರಿಸಿದ್ದಾರೆ.

See also  ಲಂಚ ಸ್ವೀಕರಿಸುತ್ತಿದ್ದ ಇಂಜಿನಿಯರ್ ಎಸಿಬಿ ಬಲೆಗೆ

ರಾಜ್ಯದ ಉಳಿದ ಜಿಲ್ಲೆಗಳನ್ನು ಹೋಲಿಸಿದರೆ ಕಾಸರಗೋಡಿನ ಮಣ್ಣಿನಲ್ಲಿ ಜೈವಿಕ ಅಂಶ ಕಡಿಮೆ ಎಂದು ಚ್ಯವನ ಕಳಕಳಿ ವ್ಯಕ್ತಪಡಿಸುತ್ತಾರೆ. ಕರ್ಗಲ್ಕಪಾರೆ ಪುಡಿ ಮಾಡಿದ ಮಣ್ಣಿನಲ್ಲಿರುವ ಲಾಟರೈಟ್ ಅಂಶ ಕೃಷಿಗೆ ಪ್ರತಿಕೂಲವಾಗಿರುತ್ತದೆ.ಇದು ಕೃಷಿಕರ ದುಡಿಮೆಯನ್ನು ಹೆಚ್ಚಿಸುತ್ತದೆ.ಆದರೂ ಇಲ್ಲಿನ ಕೃಷಿಕರ ದೃಡ ಸಂಕಲ್ಪ ಇತರರಿಗೆ ಮಾದರಿ ಎಂದು ಅಭಿಪ್ರಾಯಪಡುತ್ತಾರೆ.

ಇಕಾಲಾಜಿಕಲ್ ಇಂಜಿನಿಯರಿಂಗ್ ನ ಸಾಧ್ಯತೆಗಳನ್ನು ಫಲದಾಯಕವಾಗಿ ಬಳಸಿದ್ದು ಇವರ ಯಶಸ್ಸಿನ ಗುಟ್ಟು. ಪ್ರಕೃತಿ ಮತ್ತು ಜೀವಜಾಲಕ್ಕೆ ಏಕಕಾಲಕ್ಕೆ ಪೂರಕವಾದ, ದೀರ್ಘಗಾಮಿ ಯೋಚನೆ ಮೂಲಕ ಇವರು ಪರಿಸರ ನಿರ್ಮಾಣ ಮಾಡಿದ್ದಾರೆ. ಅತ್ಯಂತ ಕಡಿಮೆ ಗೊಬ್ಬರ ಬಳಸಿ ಇವರು ಪ್ರಕೃತಿಗೆ ಪೂರಕವಾಗಿಯೇ ಕೃಷಿ ನಡೆಸುತ್ತಾರೆ.

ಇವರ ಸಾಧನೆಯನ್ನು ಕಂಡ ಸ್ಥಳೀಯರು ನಿಬ್ಬೆರಗಾಗಿದ್ದಾರೆ. ಸಾರ್ವಜನಿಕರ ಕೃಷಿ ಸಂಬಂಧ ಯಾವ ಸಮಸ್ಯೆಯಿದ್ದರೂ ಅದನ್ನು ಪರಿಹರಿಸುವಲ್ಲಿ ನರಸಿಂಹುಲು ಸದಾ ಮುಂದಿದ್ದಾರೆ. ಇದರ ಪ್ರತ್ಯುಪಕಾರ ಎಂಬಂತೆ ಆವರಣದ ಗೇಟು ಹಾಕದೆಯೇ ಇವರು ಎಲ್ಲಿಗಾದರೂ ತೆರಳಿದರೂ ಕೃಷಿ ವಲಯವನ್ನು ಕಾಯುವ ಹೊಣೆಯನ್ನು ಸಾರ್ವಜನಿಕರೇ ವಹಿಸಿಕೊಂಡಿದ್ದಾರೆ.

ನಿವೃತ್ತಿಯ ನಂತರ ಏನು ಎಂಬ ಪ್ರಶ್ನೆಗೆ ಅವರು ಸಮರ್ಪಕ ಉತ್ತರ ಕಂಡುಕೊಂಡಿಲ್ಲ. ಊರಿಗೆ ತೆರಳುವ ಬಗೆಗೂ ಯೋಚಿಸಿಲ್ಲ. ಕೃಷಿ ಬದುಕನ್ನೇ ಇನ್ನಷ್ಟು ವಿಸ್ತರಿಸುವ ಬಗ್ಗೆ ಯೋಚನೆಗಳಿವೆ ಎಂದವರು ತಿಳಿಸುತ್ತಾರೆ.

ಇವರ ಕರ್ತವ್ಯ ವೇಳೆ ಕೃಷಿ ಮತ್ತು ಮನೆ ಎರಡನ್ನೂ ಮಡದಿ ಉಮಾದೇವಿ ವಹಿಸಿಕೊಂಡಿದ್ದಾರೆ. ಏಕ ಪುತ್ರ ವಿಶಾಖ್ ಕಾಸರಗೋಡಿನ ಎಲ್.ಬಿ.ಎಸ್.ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು