ಮಡಿಕೇರಿ: ರಾಜ್ಯ ಸರ್ಕಾರ ಯಾವುದೇ ಸಂಕಷ್ಟಕ್ಕೆ ಒಳಗಾಗಿಲ್ಲ, ಸರ್ಕಾರ ಸುಭದ್ರವಾಗಿದೆ, ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಲಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯದ್ದು ಇದು ಮೊದಲ ಪ್ರಯತ್ನವಲ್ಲ, ಈ ಹಿಂದೆಯೂ ಸರ್ಕಾರವನ್ನು ಅತಂತ್ರಗೊಳಿಸುವ ಪ್ರಯತ್ನ ಮಾಡಿ ಅದು ವಿಫಲವಾಗಿದೆ ಎಂದರು.
ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಬಿಜೆಪಿ ಶಾಸಕರಿಗೆ ಹಬ್ಬವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಮಂದಿಗೆ ಹಬ್ಬ ಹರಿದಿನಗಳ ಬೆಲೆ ಗೊತ್ತಿಲ್ಲ ಎಂದು ಯು.ಟಿ.ಖಾದರ್ ಟೀಕಿಸಿದರು.
ಲೋಕಸಭೆ ಚುನಾವಣೆಯ ಆತಂಕ ಬಿಜೆಪಿಯನ್ನು ಆವರಿಸಿದ್ದು, ಇದೇ ಕಾರಣಕ್ಕೆ ಈ ರೀತಿಯ ಬೆಳವಣಿಗೆಗಳು ಆಗುತ್ತಿವೆ. ಪಕ್ಷೇತರ ಶಾಸಕರು ಬೆಂಬಲ ಕೊಟ್ಟಿದ್ದನ್ನು ವಾಪಸ್ ಪಡೆದಿದ್ದಾರೆ ಅಷ್ಟೇ, ಇದರಿಂದಾಗಿ ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ತೊಂದರೆ ಇಲ್ಲ. ನಾವು ರೆಸಾರ್ಟ್ ರಾಜಕೀಯ ಮಾಡುವವರಲ್ಲ ಎಂದು ಸಚಿವ ಖಾದರ್ ಸ್ಪಷ್ಟಪಡಿಸಿದರು.
ಸಂತ್ರಸ್ತರಿಗೆ ಶೀಘ್ರ ಮನೆ ಸಿಗಲಿದೆ
ಮಳೆಹಾನಿಯಿಂದ ಮನೆ ಕಳೆದುಕೊಂಡ ಕೊಡಗಿನ ಸಂತ್ರಸ್ತರಿಗೆ ಶೀಘ್ರ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಎರಡು ತಿಂಗಳ ರಜೆಯಲ್ಲಿ ತೆರಳಿರುವುದರಿಂದ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವ ಕಾರ್ಯದಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗುವುದಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಸಚಿವ ಯು.ಟಿ.ಖಾದರ್ ಇದೇ ಸಂದರ್ಭ ಭರವಸೆ ನೀಡಿದರು.
ಪ್ರತೀ ತಿಂಗಳಿಗೆ 60 ಮನೆಗಳಂತೆ 840 ಮನೆಗಳ ನಿರ್ಮಾಣ ಕಾರ್ಯ ನಡೆಯಬೇಕಾಗಿದ್ದು, ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. 500 ಮನೆಗಳು ನಿರ್ಮಾಣವಾದ ನಂತರ ಮೊದಲ ಹಂತದ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು, ಈ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕೆಂದು ಸಚಿವರು ಮನವಿ ಮಾಡಿದರು.
ಎಲ್ಲರಿಗೂ ಸೂರು ಕಲ್ಪಿಸಲು ಕನಿಷ್ಠ 12 ತಿಂಗಳು ಬೇಕಾಗುತ್ತದೆ, ಅಲ್ಲಿಯವರೆಗೆ ಪ್ರತೀ ಕುಟುಂಬಕ್ಕೆ ತಿಂಗಳಿಗೆ ರೂ.10 ಸಾವಿರದಂತೆ ಮನೆ ಬಾಡಿಗೆ ನೀಡಲಾಗುತ್ತಿದೆ. ಕೊಡಗಿನ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ, ಮನೆ ನಿರ್ಮಾಣ ಕಾಮಗಾರಿ ತಡವಾಗುತ್ತಿದೆ ಎನ್ನುವ ಬಗ್ಗೆ ಸಂತ್ರಸ್ತರಿಗೆ ಆತಂಕ ಬೇಡವೆಂದರು.