ಮಡಿಕೇರಿ: ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜಿಲ್ಲೆಯ ಬೆರಳೆಣಿಕೆಯಷ್ಟು ಮಂದಿ ಜನ ವಿರೋಧಿ ಕಾರ್ಯಗಳಲ್ಲಿ ತೊಡಗಿದ್ದು, ಅಘೋಷಿತ ದಿಗ್ಬಂಧನ ಹೇರುವ ಷಡ್ಯಂತ್ರ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟುಮೊಣ್ಣಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಜನರ ನೆಮ್ಮದಿ ಕೆಡಿಸುವ ಡೋಂಗಿ ಪರಿಸರವಾದಿಗಳ ತೆರೆಮರೆಯ ಪ್ರಯತ್ನಗಳು ಮುಂದುವರೆದಿದ್ದು, ಇದೀಗ ಮತ್ತಿಗೋಡು ಆನೆ ಶಿಬಿರದ ಬಳಿ ಹಾದು ಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ-90ರ 11 ಕಿ. ಮೀ. ಉದ್ದದ ರಸ್ತೆಯಲ್ಲಿ (ಮೈಸೂರು – ಗೋಣಿಕೊಪ್ಪ ರಸ್ತೆ) ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ವಾಹನ ಸಂಚಾರ ನಿಷೇಧಿಸಬೇಕೆನ್ನುವ ಬೇಡಿಕೆ ಪ್ರಸ್ತಾಪವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆನೆಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಈ 11 ಕಿ. ಮೀ. ಉದ್ದದ ರಸ್ತೆಗೆ ಪರ್ಯಾಯ ರಸ್ತೆ ನಿರ್ಮಾಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೆ ವೇಗ ನಿಯಂತ್ರಣ ಉಪಕರಣಗಳು ಮತ್ತು ಡಿಜಿಟಲ್ ಬೋರ್ಡ್‍ಗಳನ್ನು ಅಳವಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಬೆಂಗಳೂರಿನ ಕೆಲವು ವ್ಯಕ್ತಿಗಳ ಮೂಲಕ ಡೋಂಗಿ ಪರಿಸರವಾದಿಗಳು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಟಾಟೂಮೊಣ್ಣಪ್ಪ ಆರೋಪಿಸಿದ್ದಾರೆ.
ಈ ರೀತಿಯ ನಿಯಮ ಜಾರಿಯಾದರೆ ದಕ್ಷಿಣ ಕೊಡಗಿನ ಜನರ ಪರಿಸ್ಥಿತಿ ಶೋಚನೀಯವಾಗಲಿದ್ದು, ಅಘೋಷಿತ ದಿಗ್ಬಂಧನ ಹೇರಿದಂತ್ತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೇವಲ ವಿದೇಶಿ ಹಣಕ್ಕಾಗಿ ಜನ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಡೋಂಗಿ ಪರಿಸರವಾದಿಗಳಿಂದ ಜನರ ನಿತ್ಯ ಜೀವನಕ್ಕೆ ಅಡಚಣೆ ಎದುರಾಗುತ್ತಿದೆ ಎಂದು ಆರೋಪಿಸಿರುವ ಟಾಟೂಮೊಣ್ಣಪ್ಪ, ಸೇವ್ ಕೊಡಗು ಆಂದೋಲನ ವೇದಿಕೆ ಫೆ.11 ರಂದು ಗೋಣಿಕೊಪ್ಪದಲ್ಲಿ ಪರಿಸರವಾದಿಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನಾ ರ್ಯಾಲಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಮತ್ತಿಗೋಡು ಬಳಿ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ನಿಬರ್ಂಂಧ ಹೇರಬೇಕೆಂದು ಬೇಡಿಕೆ ಇಟ್ಟಿರುವ ಪರಿಸರವಾದಿಗಳ ಕ್ರಮದ ವಿರುದ್ಧ ಪ್ರತಿಭಟನೆ ಸಂದರ್ಭ ಖಂಡನಾ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.