ಮಂಡ್ಯ: ಹುತಾತ್ಮ ಯೋಧ ರಾಜು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ. ನೆರವು ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಘೋಷಣೆ ಮಾಡುತ್ತಿದ್ದಂತೆ ಜಿಲ್ಲೆಯ ರಾಜಕಾರಣಿಗಳು ಸಹ ಆರ್ಥಿಕವಾಗಿ ಹಾಗೂ ಭೂಮಿ ನೀಡುವ ಮೂಲಕ ತಮ್ಮ ಉದಾರತೆ ಮೆರೆದಿದ್ದಾರೆ.
ಮಾಜಿ ಸಚಿವ ದಿ. ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ದೊಡ್ಡರಸಿನಕೆರೆ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಅರ್ಧ ಎಕರೆ (20 ಗುಂಟೆ) ಯನ್ನು ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಯೋಧ ಗುರು ಅವರ ಕುಟುಂಬಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರು ವೈಯಕ್ತಿಕವಾಗಿ 50 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ. ಹುತಾತ್ಮ ಯೋಧ ಗುರು ಅವರ ತಾಯಿಗೆ ನಾಗರತ್ನ ಸ್ವಾಮಿ ಅವರು ಚೆಕ್ ಹಸ್ತಾಂತರ ಮಾಡಿದರು.
ಭಾರತೀಯ ಜೀವ ವಿಮಾ ನಿಗಮವು ದಾಖಲೆ ಪರಿಶೀಲಿಸದೆ ವಿಮಾ ಹಣ ನೀಡಿ ಮಾನವೀಯತೆ ಮೆರೆದಿದೆ. ಮಂಡ್ಯ ಎಲ್ಐಮಸಿ ಶಾಖೆಯ ವ್ಯವಸ್ಥಾಪಕ ನಾಗರಾಜ್ ರಾವ್ ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಸಮ್ಮುಖದಲ್ಲಿ ಪತಿಯ ವಿಮಾ ಹಣ 3,82,000 ರೂ.ಗಳನ್ನು ಪತ್ನಿ ಕಲಾವತಿಗೆ ಹಸ್ತಾಂತರ ಮಾಡಿದರು.
ಮದ್ದೂರು ತಾಲೂಕು ಜೆಡಿಎಸ್ ಘಟಕದ ವತಿಯಿಂದ ಮೃತ ಯೋಧ ಗುರು ಅವರ ಕುಟುಂಬಕ್ಕೆ ಅಂತ್ಯಸಂಸ್ಕಾರ ಸ್ಥಳದಲ್ಲಿ ಪರಿಹಾರ ನಿಧಿ ಸಂಗ್ರಹಿಸಲಾಗಿದೆ.