ಚಾಮರಾಜನಗರ: ಗುಂಡಿಗೆ ಇಳಿದಿದ್ದ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಯಳಂದೂರು ತಾಲೂಕಿನ, ಹೊನ್ನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಗಳಾದ ಸಿದ್ದಶೆಟ್ಟಿ ಅಲಿಯಾಸ್ ಕುಳ್ಳ ಹಾಗೂ ಮಹದೇವಶೆಟ್ಟಿ ಅಲಿಯಾಸ್ ಮೇಷ್ಟ್ರು ಉಸಿರುಗಟ್ಟಿ ಸಾವನ್ನಪ್ಪಿದ ದುರ್ದೈವಿಗಳು. ಹೊನ್ನೂರು ಗ್ರಾಮದ ನಿವಾಸಿ ವೆಂಕಟಶೆಟ್ಟಿ ಎಂಬುವರ ಪುತ್ರ ಬಿಚಳ್ಳಿ ದಿನೇಶ್ ಎಂಬುವವರು ಬಾಳೆಕಾಯಿಯನ್ನು ಹಣ್ಣು ಮಾಡಲು ಗುಂಡಿಯನ್ನು ನಿರ್ಮಾಣ ಮಾಡಿದ್ದರಲ್ಲಿ ಸಿದ್ದಶೆಟ್ಟಿ ಮತ್ತು ಮಹದೇವಶೆಟ್ಟಿ ಎಂಬಿಬ್ಬರು ಕೆಲಸ ಮಾಡುವ ಸಲುವಾಗಿ ಇಳಿದಿದ್ದರು ಎನ್ನಲಾಗಿದೆ.
ಗುಂಡಿಗೆ ಇಳಿದು ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿ ಆಮ್ಲಜನಕದ ಕೊರತೆಯಾಗಿದೆ. ಈ ಸಂದರ್ಭ ಅವರು ಅದರಿಂದ ಹೊರಬರಲು ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗದ ಕಾರಣ ಉಸಿರುಗಟ್ಟಿ ಅಸ್ವಸ್ಥರಾಗಿದ್ದು ಬಳಿಕ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಯಳಂದೂರು ಠಾಣೆ ಪೊಲೀಸರು ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.