ಮಡಿಕೇರಿ: ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಹಾಗೂ ಪ್ರಾಮಾಣಿಕ ಮುಖಂಡರನ್ನು ಕಡೆಗಣಿಸಿ ಕೆ.ಎಂ.ಗಣೇಶ್ ಅವರಿಗೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿರುವ ಕ್ರಮವನ್ನು ಖಂಡಿಸುವುದಾಗಿ ಜೆಡಿಎಸ್ ಮಾಜಿ ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಕೆ.ಎಂ.ಗಣೇಶ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿರುವ ಬಗ್ಗೆ ಜೆಡಿಎಸ್ನ ಪ್ರಾಮಾಣಿಕ ಕಾರ್ಯಕರ್ತರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಯಾರೂ ಕೂಡ ಗಣೇಶ್ ಅವರ ನಾಯಕತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ನಾಯಕರನ್ನು ಆಯ್ಕೆ ಮಾಡುವಂತೆ ಈ ಹಿಂದೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರೊಂದಿಗೆ ಜೀವಿಜಯ ಅವರು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿದ್ದರು. ಈ ಮನವಿಗೆ ರಾಷ್ಟ್ರಾಧ್ಯಕ್ಷರು ಕೂಡ ಸೂಕ್ತ ಭರವಸೆಯನ್ನು ನೀಡಿದ್ದರು. ಆದರೆ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ಏಕಾಏಕಿ ಗಣೇಶ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ರಾಜೇಶ್ ಯಲ್ಲಪ್ಪ ಟೀಕಿಸಿದರು.
ಕೊಡಗು ಜಿಲ್ಲೆಯಲ್ಲಿ ಸಧ್ಯದ ಮಟ್ಟಿಗೆ ಸೋಮವಾರಪೇಟೆಯಲ್ಲಿ ಪಕ್ಷ ಬಲಿಷ್ಠವಾಗಿದೆ. ಹೀಗಿರುವಾಗ ಅಲ್ಲಿನ ಕಾರ್ಯಕರ್ತರನ್ನು ನಿರ್ಲಕ್ಷಿಸಿ ಪಕ್ಷ ಕಟ್ಟಲು ಸಾಧ್ಯವಿಲ್ಲ. ಗಣೇಶ್ ಅವರ ವಿರುದ್ಧ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿರುವ ಹಂತದಲ್ಲೇ ಬಲವಂತವಾಗಿ ಅಧ್ಯಕ್ಷ ಸ್ಥಾನ ಪಡೆದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷೆ ಹೆಚ್.ಬಿ.ಜಯಮ್ಮ, ಪ್ರಮುಖರಾದ ಜಾನಕಿ, ಹೆಚ್.ಕೆ.ಪ್ರ್ರೆಸಿ ಹಾಗೂ ಧರ್ಮಪ್ಪ ಉಪಸ್ಥಿತರಿದ್ದರು.