ಮಡಿಕೇರಿ: ಮತದಾನದ ಮಹತ್ವ ಕುರಿತ ಜಾಗೃತಿ ಜಾಥಗೆ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಅಧ್ಯಕ್ಷರಾದ ಕೆ.ಲಕ್ಷ್ಮೀಪ್ರಿಯಾ ಅವರು ನಗರದ ಗದ್ದುಗೆ ಬಳಿ ಗುರುವಾರ ಚಾಲನೆ ನೀಡಿದರು.
ಮತದಾನ ನಮ್ಮಿಂದ, ಮತದಾನ ಹೆಮ್ಮೆಯಿಂದ, ಮತ ಹಕ್ಕು ಚಲಾಯಿಸುವುದು ಅರ್ಹರದ್ದಾಗಿದೆ, ತಪ್ಪದೇ ಮತ ಚಲಾಯಿಸಿ ಎಂದು ಸ್ವೀಪ್ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಕರೆ ನೀಡಿದರು.
ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಹದಿನೆಂಟು ವರ್ಷ ಪೂರ್ಣಗೊಂಡವರು ಮತದಾರರ ಚುನಾವಣಾ ಗುರುತಿನ ಚೀಟಿ ಪಡೆದು ಕಡ್ಡಾಯವಾಗಿ ಮತ ಚಲಾಯಿಸಬೇಕು. ಜೊತೆಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವಂತಾಗಬೇಕು ಎಂದು ಜಿ.ಪಂ.ಸಿಇಒ ಅವರು ಸಲಹೆ ಮಾಡಿದರು.
ವಿದ್ಯುನ್ಮಾನ ಮತಯಂತ್ರದಲ್ಲಿ ಕಂಟ್ರೊಲ್ ಯುನಿಟ್ ಮತ್ತು ಬ್ಯಾಲೆಟ್ ಯುನಿಟ್ ಹಾಗೂ ವಿವಿ ಪ್ಯಾಟ್ ಪ್ರಮುಖವಾಗಿದೆ. ವಿವಿ ಪ್ಯಾಟ್ನಿಂದ ಮತವನ್ನು ಯಾರಿಗೆ ಚಲಾಯಿಸಿದ್ದೇವೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಸಹಕಾರಿಯಾಗಿದೆ. ಆ ದಿಸೆಯಲ್ಲಿ ಅರ್ಹರೆಲ್ಲರೂ ಮತದಾನ ಮಾಡುವಂತಾಗಬೇಕು ಎಂದು ಕೆ.ಲಕ್ಷ್ಮಿಪ್ರಿಯಾ ಅವರು ಕೋರಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ ಅವರು ಮಾತನಾಡಿ, ಪ್ರಜಾಪ್ರಭುತ್ವ ಬಲಪಡಿಸಲು ಏಕೈಕ ಅವಕಾಶ ಮತದಾನವಾಗಿದ್ದು, ಮತದಾನ ಎಂಬ ಅಸ್ತ್ರವನ್ನು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದೆಂದು ಅವರು ಮನವಿ ಮಾಡಿದರು.
ಪೌರಾಯುಕ್ತರಾದ ಎಂ.ಎಲ್.ರಮೇಶ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಜನತಂತ್ರದ ಹಬ್ಬದಲ್ಲಿ ಮತದಾರರು ಪವಿತ್ರ ಮತದಾನ ಕಾರ್ಯದಲ್ಲಿ ಮತ ಚಲಾಯಿಸಬೇಕು. ಇದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅರ್ಹರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಇತರರಿಗೂ ಮಾಹಿತಿ ನೀಡುವಂತಾಗಬೇಕು. ಜೊತೆಗೆ ಅರ್ಹರು ಮತದಾನ ಮಾಡಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಜಿ.ಪಂ.ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ನಗರಸಭೆಯ ಸುಜಾತ, ರಮೇಶ್, ಬಷೀರ್, ಶಿಶು ಅಭಿವೃಧ್ಧಿ ಯೋಜನಾ ಇಲಾಖೆಯ ವ್ಯವಸ್ಥಾಪಕರಾದ ಸುನಿತಾ, ಮಮ್ತಾಜ್, ಮಂಜುನಾಥ್, ಯಶೋಧ, ಪ್ರಿಯಾ, ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಇತರರು ಇದ್ದರು.
ಜಾಥಾವೂ ನಗರದ ಮಹದೇವಪೇಟೆ ಮುಖ್ಯರಸ್ತೆ ಮೂಲಕ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಜನರಲ್ ತಿಮ್ಮಯ್ಯ ವೃತ್ತ ಮೂಲಕ ಕಾವೇರಿ ಕಲಾ ಕ್ಷೇತ್ರದಲ್ಲಿ ಕೊನೆಗೊಂಡಿತು.