ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಏಚ್ಚಿಲಡ್ಕದ ಮುರಳಿ(36) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಶಾಮೀಲಾಗಿದ್ದ ಎನ್ನಲಾಗಿರುವ ಗಂಗಾಧರ ಎಂಬಾತನ ಕಾರಿನ ಚಾಲಕ ಮುರಳಿ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯನ್ನು ಕ್ರೈಂ ಬ್ರಾಂಚ್ ಪೊಲೀಸರು ಕೈಗೆತ್ತಿಕೊಂಡ ಬಳಿಕ ಇದು ಮೊದಲ ಬಂಧನವಾಗಿದೆ. ಆರೋಪಿಗಳು ಕೃತ್ಯದ ಬಳಿಕ ಪರಾರಿಯಾಗಲು ಮುರಳಿ ನೆರವಾಗಿದ್ದ. ಈ ಹಿಂದೆ ಬಂಧಿತ ಆರೋಪಿಗಳಿಂದ ಲಭಿಸಿದ ಮಾಹಿತಿಯಂತೆ ಈತನನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಪಿಎಂ ಸ್ಥಳೀಯ ಸಮಿತಿ ಮುಖಂಡ ಪೀತಾಂಬರನ್ ಸೇರಿದಂತೆ ಏಳು ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು. ಫೆಬ್ರವರಿ 17ರಂದು ರಾತ್ರಿ ಪೆರಿಯ ಕಲ್ಯೊಟ್ ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಬೈಕ್ ತಡೆದ ತಂಡವು ಕೊಚ್ಚಿ ಕೊಲೆಗೈದಿತ್ತು.