ಮಡಿಕೇರಿ: ಮಡಿಕೇರಿಯ ತಾಳತ್ತಮನೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪಾಜೆಯ ಬಾಲಚಂದ್ರ ಕಳಗಿ(42) ಸಾವನ್ನಪ್ಪಿದ್ದಾರೆ.
ಮಂಗಳವಾರ ಸಂಜೆ ತಮ್ಮ ಓಮ್ನಿ ವಾಹನದಲ್ಲಿ ಮಡಿಕೇರಿಯಿಂದ ಸಂಪಾಜೆಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಕಳಗಿ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆ ತರುವ ಸಂದರ್ಭ ಮೃತಪಟ್ಟರು.
ಘಟನೆ ನಡೆದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತರು ತಂದೆ, ತಾಯಿ, ಅಕ್ಕ, ಭಾವ, ಪತ್ನಿಯನ್ನು ಅಗಲಿದ್ದಾರೆ. ಸಂಸದ ಪ್ರತಾಪ್‍ಸಿಂಹ, ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ವಿಧಾನಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಆಸ್ಪತ್ರೆಗೆ ಭೇಟಿ ನೀಡಿ ದುಃಖ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಸ್ಪತ್ರೆಯಲ್ಲಿ ನೆರೆದಿದ್ದರು.
ಸಂಘ ಪರಿವಾರದಲ್ಲೂ ಗುರುತಿಸಿಕೊಂಡಿದ್ದ ಬಾಲಚಂದ್ರಕಳಗಿ ಅವರು ಸಂಪಾಜೆ ಗ್ರಾ.ಪಂ ಅಧ್ಯಕ್ಷರಾಗಿ ಹಾಗೂ ಸಂಪಾಜೆ ಪಯಸ್ವಿನಿ ಸಹಕಾರ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಬಾಲಚಂದ್ರಕಳಗಿ ಕೊಡಗು, ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರ ಪರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು.