ಕೆ.ಆರ್.ಪೇಟೆ: ಮನೆಯಲ್ಲಿ ಮಂಚದ ಮೇಲೆ ಮಲಗಿದ್ದ ಅಣ್ಣನನ್ನು ದೊಣ್ಣೆಯಿಂದ ಹೊಡೆದು ಬಳಿಕ ಉಸಿರುಗಟ್ಟಿಸಿ ಕೊಲೆಗೈದು ಬೇರೇ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದ ದೇವರಾಜೇಗೌಡ ಅವರ ಪುತ್ರ ಎನ್.ಡಿ.ಉಮೇಶ(36) ಬಂಧಿತ ಆರೋಪಿಯಾಗಿದ್ದಾನೆ.
ಈತ ಮಾ.25ರಂದು ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದಲ್ಲಿ ರಾತ್ರಿ ಸುಮಾರು 11.30ರಿಂದ 12ಗಂಟೆ ಸಮಯದಲ್ಲಿ ತನ್ನ ಸ್ವಂತ ಅಣ್ಣ ವಕೀಲ ಸತೀಶ್(40) ಎಂಬಾತ ನಿದ್ರಿಸುತ್ತಿದ್ದ ವೇಳೆ ದೊಣ್ಣೆಯಿಂದ ಮುಖದ ಭಾಗಕ್ಕೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ನಂತರ ಹತ್ಯೆಗೆ ಬಳಸಿದ ದೊಣ್ಣೆಯನ್ನು ಸಮೀಪದ ಹುಲ್ಲಿನ ಮೆದೆ ಕೆಳಗಿಟ್ಟು ಗೊತ್ತಿಲ್ಲದವನಂತೆ ಮನೆಯ ಮಹಡಿಯ ಮೇಲೆ(ಅಟ್ಟದ ಮೇಲೆ) ಮಲಗಿದ್ದನು. ಅಲ್ಲದೆ ಬೆಳಗ್ಗೆ ತೋಟದ ಕಡೆ ಹೋಗಿ ಬಂದ ನಂತರ ಗ್ರಾಮಸ್ಥರಿಗೆ ಯಾರೋ ಹತ್ಯೆ ಮಾಡಿದ್ದಾರೆ ಎಂದು ನಾಟಕವಾಡಿದ್ದನು.
ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗಲೂ ರಾತ್ರಿ ಸುಮಾರು 11.45ರ ಸುಮಾರಿನಲ್ಲಿ ನಾಲ್ಕೈದು ಮಂದಿ ಮನೆಯ ಬಳಿ ಬಂದು ನನ್ನ ಅಣ್ಣ ವಕೀಲ ಸತೀಶನೊಂದಿಗೆ ಹಣದ ವಿಚಾರವಾಗಿ ಚರ್ಚೆ ನಡೆಸುತ್ತಾ ಜಗಳ ಮಾಡುತ್ತಿದ್ದರು. ನನ್ನೊಂದಿಗೆ ಮುನಿಸಿಕೊಂಡಿದ್ದ ಕಾರಣ ಅವರ ವಿಚಾರ ನನಗೇಕೆ ಎಂದು ನಾನು ನನ್ನ ಪಾಡಿಗೆ ಮಹಡಿಯಲ್ಲಿ ಮಲಗಿದ್ದೆ ಬೆಳಗ್ಗೆ ಎದ್ದು ನೋಡಿದಾಗ ನನ್ನ ಸಹೋದರ ಸತೀಶ್ ಮೃತಪಟ್ಟಿರುವುದು ತಿಳಿದು ಬಂತು ಎಂದು ಕಥೆ ಕಟ್ಟಿದ್ದನು.
ಆತನ ಮಾತಿನಲ್ಲಿ ನಾಟಕೀಯತೆ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು ಆತನ ಮೇಲೆ ನಿಗಾವಹಿಸಿದ್ದರು. ಈ ಘಟನೆಯ ಸಂಬಂಧ ಮೃತ ವಕೀಲ ಸತೀಶನ ಪತ್ನಿ ಭಾರತಿ ಅವರು ನನ್ನ ಗಂಡನನ್ನು ಉದ್ದೇಶ ಪೂರ್ವಕವಾಗಿ ಯಾರೋ ಕೊಲೆ ಮಾಡಿರುತ್ತಾರೆ. ಹಾಗಾಗಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಗುರಿಪಡಿಸಿ ನ್ಯಾಯ ಕೊಡಿಸಬೇಕೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಿದಾಗ ಮನೆಯ ಬಳಿ ಹುಲ್ಲಿನ ಮೆದೆ ಕೆಳಗೆ ದೊಣ್ಣೆ ಪತ್ತೆಯಾಯಿತು. ದೊಣ್ಣೆಯ ಜಾಡು ಹಿಡಿದು ತನಿಖೆ ನಡೆಸಿದಾಗ ಮೃತ ವಕೀಲನ ತಮ್ಮ ಉಮೇಶನೇ ಕೊಲೆ ಆರೋಪಿ ಎಂಬುದು ಪತ್ತೆಯಾಯಿತು.
ಈ ಸಂಬಂಧ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಆರೋಪಿ ಎನ್.ಡಿ.ಉಮೇಶನು ಅಣ್ಣ ಸತೀಶನು ನನಗೆ ಯಾವಾಗಲೂ 36 ವರ್ಷವಾದರೂ ಇನ್ನು ಮದುವೆಯಾಗಿಲ್ಲ. ಹೆಣ್ಣು ಸಿಕ್ಕಿಲ್ಲ ಹಾಗೆ ಹೀಗೆ ಎಂದು ಅಣಕಿಸುತ್ತಿದ್ದ ಎಂಬ ಕಾರಣಕ್ಕಾಗಿ ನಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆಯ ನಂತರ ಊರಿನಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದ ಆರೋಪಿ ಉಮೇಶನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.