ಕಾರವಾರ: ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ ನಗದನ್ನು ಯಲ್ಲಾಪುರ ತಾಲೂಕಿನ ಕಿರವತ್ತಿಯ ಚೆಕ್ ಪೋಸ್ಟ್‌ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಒಬ್ಬ ಅಪ್ರಾಪ್ತ ಬಾಲಕ ಸೇರಿ ಒಟ್ಟು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಲೋಕಸಭೆ ಚುನಾವಣೆ ಪ್ರಯುಕ್ತ ಜಿಲ್ಲೆಯ ಎಲ್ಲ ಚೆಕ್ ಪೋಸ್ಟ್‌ಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಿರವತ್ತಿ ಚೆಕ್‌ಪೋಸ್ಟ್‌ನಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ ತಪಾಸಣೆ ನಡೆಸಿದಾಗ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.44 ಕೆಜಿ ಬಂಗಾರದ ಹಾಗೂ 3 ಕೆಜಿ ಬೆಳ್ಳಿಯ ಆಭರಣಗಳು ಮತ್ತು 2.68 ಲಕ್ಷ ರೂ. ನಗದು ಪತ್ತೆಯಾಗಿದೆ. ತಕ್ಷಣ ಐವರು ಆರೋಪಿಗಳನ್ನು ಹಾಗೂ ಅಕ್ರಮ ಸ್ವತ್ತನ್ನು ವಶಕ್ಕೆ ಪಡೆದಿದ್ದಾರೆ.
ನೇಪಾಳ ಮೂಲದ ಹಾಲಿ ಮುಂಬಯಿಯಲ್ಲಿ ನೆಲೆಸಿರುವ ಸೀತಾರಾಮ ಭೀಮಮಹದ್ದೂರ ಸಾವುದ್(31), ಏಕಮಥ ಮಾನಬಹದ್ದೂರ ಷಾ(18), ಡುಮ್ಮರ ದಿಲ್‌ಬಹದ್ದೂರ ಸಾವುದ್(20) ನೇಪಾಳ ಮೂಲದ ಹುಬ್ಬಳ್ಳಿಯಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿರುವ ಬಾಲಸಿಂಗ್ ಯಾನೆ ರಮೆಲಾ ಬೀರು ಬಹದ್ದೂರ(20) ಬಂಧಿತರು. ಇವರನ್ನು ವಿಚಾರಣೆ ನಡೆಸಿದಾಗ ಇದನ್ನು ತಾವು ಕದ್ದು ತಂದಿರುವುದಾಗಿ ಆರೋಪಿಗಳು ಹೇಳಿದ್ದಾರೆ ಎಂದು ಯಲ್ಲಾಪುರ ತಹಸೀಲ್ದಾರ್ ಶಂಕರ್ ಜಿ.ಎಸ್. ಮಾಹಿತಿ ನೀಡಿದ್ದಾರೆ. ಪಿಎಸ್‌ಐ ಮಂಜುನಾಥ, ಎಆರ್‌ಓ ರುದ್ರೇಶಪ್ಪ ಹಾಗೂ ಡಿವೈಎಸ್‌ಪಿ ಭಾಸ್ಕರ ಸ್ಥಳಕ್ಕೆ ತೆರಳಿ ತನಿಖೆ ಮುಂದುವರೆಸಿದ್ದಾರೆ.