ಮಡಿಕೇರಿ: ಕೊಡಗು ಜಿಲ್ಲೆಯ ಮೂಲಕ ಕೇರಳ ರಾಜ್ಯಕ್ಕೆ ಸಾಗಾಟ ಮಾಡಲಾಗುತ್ತಿದ್ದ ಭಾರೀ ಪ್ರಮಾಣದ ಅಕ್ರಮ ಮದ್ಯವನ್ನು ಕೊಡಗು ಜಿಲ್ಲಾ ಅಬಕಾರಿ ಇಲಾಖೆ ಸಿನಿಮೀಯ ಮಾದರಿಯಲ್ಲಿ ಪತ್ತೆಹಚ್ಚಿ, ಮದ್ಯ, ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದಾರೆ.
ವಶಕ್ಕೆ ಪಡೆಯಲಾದ ಮದ್ಯ ಮತ್ತು ವಾಹನದ ಒಟ್ಟು ಮೌಲ್ಯ 28 ಲಕ್ಷ ರೂ.ಗಳಾಗಿದ್ದು, ಗಂಭೀರ ಪ್ರಕರಣ ದಾಖಲಿಸಿಕೊಂಡು ಮದ್ಯ ಸಾಗಾಟದ ಹಿಂದಿರುವ ಕಾಣದ ಕೈಗಳಿಗಾಗಿ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಈ ಅಕ್ರಮ ಮದ್ಯವನ್ನು ಮಹಾರಾಷ್ಟ್ರ, ಬೆಂಗಳೂರು, ಮೈಸೂರು, ಪೆರುಂಬಾಡಿ ಮಾರ್ಗವಾಗಿ ಕೇರಳದ ವಯನಾಡು ಕಡೆಗೆ ಸಾಗಾಟ ಮಾಡಲು ಯತ್ನಿಸಿರುವ ಬಗ್ಗೆ ಅಬಕಾರಿ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದಲೇ ಜಿಲ್ಲೆಯಾದ್ಯಂತ ಹೈಅಲರ್ಟ್ ಆಗಿದ್ದ ಅಬಕಾರಿ ಇಲಾಖೆ ಜಿಲ್ಲೆಯಲ್ಲಿ 14 ಚೆಕ್ಪೋಸ್ಟ್ ಗಳನ್ನು ಅಳವಡಿಸಿ ಚುನಾವಣಾ ಅಕ್ರಮಗಳ ಬಗ್ಗೆ ಹದ್ದಿನ ಕಣ್ಣಿಟ್ಟಿತ್ತು. ಕಾಸರಗೋಡು, ವಯನಾಡು, ಕಣ್ಣೂರು ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಈ ನಡುವೆಯೇ, ಬೆಂಗಳೂರಿನಿಂದ ಕೊಡಗು ಜಿಲ್ಲೆಯ ಮೂಲಕ ಲಾರಿಯಲ್ಲಿ ಭಾರೀ ಪ್ರಮಾಣದ ಅಕ್ರಮ ಮದ್ಯ ಸಾಗಿಸುವ ಬಗ್ಗೆ ಕೊಡಗು ಅಬಕಾರಿ ಇಲಾಖೆಗೆ ಕಳೆದ ಒಂದು ವಾರದ ಹಿಂದೆಯೇ ಖಚಿತ ಮಾಹಿತಿ ಇತ್ತು ಎಂದು ತಿಳಿದು ಬಂದಿದೆ.
ಎಂದಿನಂತೆ ಅಬಕಾರಿ ಅಧಿಕಾರಿಗಳು ಎ.2ರ ಬೆಳಗ್ಗೆ ವಿರಾಜಪೇಟೆ ಸಮೀಪದ ಪೆರುಂಬಾಡಿ ಚೆಕ್ಪೋಸ್ಟ್ ಮೂಲಕ ಕೇರಳ ಮತ್ತು ಕೊಡಗು ಜಿಲ್ಲೆಗೆ ಹೋಗಿ ಬರುತ್ತಿರುವ ಪ್ರತಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭ ಮಹಾರಾಷ್ಟ್ರ ರಾಜ್ಯದ ನೋಂದಣಿ ಹೊಂದಿದ ಅಶೋಕ್ ಲೈಲ್ಯಾಂಡ್ ಕಂಪೆನಿಯ 6 ಚಕ್ರದ ಲಾರಿ(ಎಂ.ಹೆಚ್.13-ಸಿ.ಯು.4292) ಮೈಸೂರಿನಿಂದ ಪೆರುಂಬಾಡಿ ಚೆಕ್ಪೋಸ್ಟ್ ಮೂಲಕ ಕೇರಳದ ಕಡೆಗೆ ತೆರಳಲು ಇತ್ತ ಕಡೆ ಬಂದಿದೆ. ಈ ಲಾರಿಯ ಎರಡೂ ಬದಿಗಳಲ್ಲಿ ಪ್ರತಿಷ್ಟಿತ ಪರ್ಸೆಲ್ ಸಂಸ್ಥೆಯಾದ ವಿ.ಆರ್.ಎಲ್.ನ ಬೋರ್ಡ್ ಮತ್ತು ಲಾರಿಯ ಮುಂಭಾಗ ವಿ.ಆರ್.ಎಲ್. ಸ್ಟಿಕ್ಕರ್ ಕೂಡ ಅಳವಡಿಸಲಾಗಿತ್ತು. ಲಾರಿಯ ಹಿಂದಿನ ಬಾಗಿಲನ್ನು ತೆರೆದ ಅಬಕಾರಿ ಅಧಿಕಾರಿಗಳು ಅದರಲ್ಲಿ ಹಗುರ ಭಾರದ ಕೊರಿಯಾರ್ ಬಾಕ್ಸ್ ಗಳು ಇರುವುದನ್ನು ಗಮನಿಸಿ, ಕೇರಳದ ಕಡೆ ಸಾಗಲು ಅನುವು ಮಾಡಿಕೊಟ್ಟಿದ್ದರು. ಆದರೆ, ಹೊರಡುವ ಸಂದರ್ಭ ಲಾರಿಯು ಅತ್ಯಧಿಕ ಭಾರ ಹೊತ್ತಿರುವಂತೆ ಲಾರಿಯ ಚಕ್ರ ಮತ್ತು ಅದರ ಸೆಟ್ ಪ್ಲೇಟ್ ಗಳು ಅದುಮಿಕೊಂಡಿದ್ದವು.
ಇದರಿಂದ ಸಂಶಯಗೊಂಡ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತೆ ಲಾರಿಯನ್ನು ತಡೆದು ನಿಲ್ಲಿಸಿ ಲಾರಿಯ ಒಳಗಿದ್ದ ಕೊರಿಯರ್ ವಸ್ತುಗಳನ್ನು ಹೊರಗೆಳೆದು ಇಂಚಿಂಚು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಈ ಸಂದರ್ಭ ಲಾರಿಯ ಒಳಭಾಗದಲ್ಲಿ ಪ್ರತ್ಯೇಕ ಕಪಾಟು ರೀತಿಯಲ್ಲಿ ನೆಟ್ ಬೋಲ್ಟ್ ಗಳ ಸಹಾಯದಿಂದ ಭದ್ರವಾಗಿ ಬಾಗಿಲುಗಳನ್ನು ಅಳವಡಿಸಿರುವುದು ಪತ್ತೆಯಾಗಿದೆ. ಬಳಿಕ ಆ ಕಪಾಟನ್ನು ತೆರೆದು ನೋಡಿದಾಗ ಲಕ್ಷಾಂತರ ಮೌಲ್ಯದ ವಿವಿಧ ಬ್ರ್ಯಾಂಡ್ಗಳ 250 ಬಾಕ್ಸ್ ಗಳಷ್ಟು ಮದ್ಯವಿರುವುದನ್ನು ಕಂಡು ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೇಸ್ತು ಬಿದ್ದಿದ್ದಾರೆ. ಈ ಮದ್ಯವನ್ನು ಪರಿಶೀಲನೆ ನಡೆಸಿದ ಸಂದರ್ಭ ಅವುಗಳೆಲ್ಲ ಮಹಾರಾಷ್ಟ್ರದಲ್ಲಿ ತಯಾರಾಗಿದ್ದು, ಪ್ರತಿ ಬಾಕ್ಸ್ ಮತ್ತು ಬಾಟಲಿಗಳ ಮೇಲೆ “ಗೋವಾದಲ್ಲಿ ಮಾರಾಟಕ್ಕೆ ಮಾತ್ರ” ಎಂದು ನಮೂದಿಸಿರುವುದು ಪತ್ತೆಯಾಗಿದೆ. ಲಾರಿಯ ಚಾಲಕ ಶಂಕರ ಪೂಜಾರಿ ಮತ್ತು ಕ್ಲೀನರ್ ರಾಜೇಶ್ ಎಂಬವರನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು, ಗಂಭೀರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಇಲ್ಲಿಯವರೆಗೆ 72 ಲಕ್ಷ ರೂ.ಮೌಲ್ಯದ ಮಾಲು ವಶ
ಪ್ರತಿಷ್ಟಿತ ಸಂಸ್ಥೆಯ ಹೆಸರನ್ನು ಲಾರಿಯಲ್ಲಿ ಬಳಸಿಕೊಂಡಿದ್ದು, ಸಂಸ್ಥೆಗೂ ಅಕ್ರಮ ಮದ್ಯ ಸಾಗಿಸುತ್ತಿದ್ದ ಲಾರಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಅಬಕಾರಿ ಆಯುಕ್ತ ವೀರಣ್ಣ ಬಾಗೇವಾಡಿ ಸ್ಪಷ್ಟಪಡಿಸಿದರು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಾದ್ಯಂತ ದಾಳಿ ನಡೆಸಿ, 31 ಗಂಭೀರ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟದ 186 ಪ್ರಕರಣ ಮತ್ತು ಮದ್ಯ ಸನ್ನದ್ದುಗಳ ಮೇಲೆ ದಾಳಿ ನಡೆಸಿ 67 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 4595ಲೀ. ಮದ್ಯ, 3948ಲೀ. ಬಿಯರ್, 6 ವಾಹನ ಜಪ್ತಿ ಸೇರಿದಂತೆ ಒಟ್ಟು 72 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕುಟ್ಟ ಗ್ರಾಮದಲ್ಲಿ ಗಾಂಜಾ ಮಾರುತ್ತಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಿ 60ಗ್ರಾಂ. ಗಾಂಜಾ ಮತ್ತು ಓರ್ವ ಮಹಿಳೆಯನ್ನೂ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದೂ ಜಿಲ್ಲಾ ಅಬಕಾರಿ ಆಯುಕ್ತ ವೀರಣ್ಣ ಬಾಗೇವಾಡಿ ಮಾಹಿತಿ ನೀಡಿದರು.