ಚಾಮರಾಜನಗರ: ಕೊಳ್ಳೆಗಾಲದಲ್ಲಿ ಚಿಂತಕ ವಿಚಾರವಾದಿ ಪ್ರೊ. ಮಹೇಶ್ಚಂದ್ರ ಗುರು ಸುದ್ದಿಗೋಷ್ಟಿ ನಡೆಸುತ್ತಿದ್ದ ಸ್ಥಳಕ್ಕೆ ನುಗ್ಗಿದ ಬಿಎಸ್ಪಿ ಕಾರ್ಯಕರ್ತರು ಗದ್ದಲ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ.
ಚಿಂತಕ ಹಾಗೂ ವಿಚಾರವಾದಿ ಆಗಿರುವ ಪ್ರೊ. ಮಹೇಶ್ಚಂದ್ರ ಗುರು ಮತ್ತು ಇತರರು ಕೊಳ್ಳೆಗಾಲದಲ್ಲಿ ಲೋಕಸಭೆ ಚುನಾವಣೆಯ ಸಂಬಂಧ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಮತ್ತು ಬಿಎಸ್ಪಿ ಪಕ್ಷದ ವಿರುದ್ದ ಜರೆಯುತ್ತಿದ್ದರು. ಇದರ ಮಾಹಿತಿ ಅರಿತ ಬಿಎಸ್ಪಿ ಕಾರ್ಯಕರ್ತರು, ಸುದ್ದಿಗೋಷ್ಠಿ ನಡೆಸುತ್ತಿದ್ದ ಸ್ಥಳಕ್ಕೆ ನುಗ್ಗಿ ಪ್ರೊ. ಮಹೇಶ್ಚಂದ್ರ ಗುರುವಿಗೆ ತರಾಟೆಗೆ ತೆಗೆದು ಕೊಂಡಾಗ ಮಾತಿನ ಚಕಮಕಿ ನಡೆಯಿತು.
ಮಹೇಶ್ಗುರುವನ್ನು ಸುತ್ತುವರೆದ ಬಿಎಸ್ಪಿ ಕಾರ್ಯಕರ್ತರು ಧಿಕ್ಕಾರ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ದಲಿತರು ಹಾಗೂ ಸವರ್ಣೀಯರ ನಡುವೆ ಕೋಮು ಗಲಭೆ ಹುಟ್ಟು ಹಾಕಲು ಬಂದಿರುವ ಮಾನಸಿಕ ಅಸ್ವಸ್ಥ ಪ್ರೊ.ಮಹೇಶ್ಚಂದ್ರ ಗುರು ಎಂದು ಬಿಎಸ್ಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮಹೇಶ್ ಚಂದ್ರ ಗುರು ಕಾಂಗ್ರೆಸ್ ಏಜೆಂಟ್ ಎಂದು ಆರೋಪಿಸಿದರು.
ಗದ್ದಲ ಗೊಂದಲದ ನಡುವೆಯೇ ಪೊಲೀಸರ ರಕ್ಷಣೆಯಲ್ಲಿ ಹೊರಬಂದ ಮಹೇಶ್ ಚಂದ್ರ ಗುರು ಸುದ್ದಿಗೋಷ್ಠಿ ಮೊಟಕುಗೊಳಿಸಿ ಮೈಸೂರಿನತ್ತ ತೆರಳಿದ್ದಾರೆ.