ಮಂಡ್ಯ: ಬಹುಶಃ ಇದುವರೆಗೆ ಮಂಡ್ಯದಲ್ಲಿ ನಡೆದ ಚುನಾವಣೆಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ವಿಭಿನ್ನವಾಗಿದ್ದು ಇಡೀ ದೇಶವೇ ಇತ್ತ ತಿರುಗಿ ನೋಡುವಂತೆ ಮಾಡಿದೆ.
ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಜೊತೆಯಾಗಿ ಹೋಗುವಂತೆ ಸೂಚನೆ ನೀಡಿದರೂ ಅದು ಮಂಡ್ಯದಲ್ಲಿ ಮಾತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದು ದೇವೇಗೌಡರ ಕುಟುಂಬವನ್ನು ಆತಂಕಕ್ಕೆ ತಳ್ಳಿದೆ.
ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಏಕಾಂಗಿಯಾಗಿದೆ. ಕುಮಾರಸ್ವಾಮಿ ತನ್ನ ಮಗನನ್ನು ಗೆಲ್ಲಿಸಿಕೊಳ್ಳಲೇ ಬೇಕೆಂಬ ಹಠಕ್ಕೆ ಬಿದ್ದು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಜತೆಗೆ ಎದುರಾಳಿ ಸುಮಲತಾ ಅಂಬರೀಶ್ ಅವರನ್ನು ಮಣಿಸಲು ಎಲ್ಲ ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ. ಆದರೆ ಸುಮಲತಾ ಅವರಿಗೆ ಬೆಂಬಲ ನೀಡುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯಲ್ಲದೆ ತಾವೇ ಸ್ವಂತ ಖರ್ಚಿನಲ್ಲಿ ಚುನಾವಣಾ ಪ್ರಚಾರವನ್ನು ಮಾಡುತ್ತಿದ್ದಾರೆ.
ಇದೀಗ ಹಲವು ಹಗರಣಗಳನ್ನು ಬಯಲಿಗೆಳೆದಿರುವ ಮತ್ತು ಮಂಡ್ಯದ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟವನ್ನು ಮಾಡುತ್ತಾ ಬಂದಿರುವ ಸಾಮಾಜಿಕ ಕಾರ್ಯಕರ್ತ ಡಾ.ರವಿಂದ್ರ ಅವರು ಸುಮಲತಾ ಪರ ಪ್ರಚಾರಕ್ಕಿಳಿದಿದ್ದು, ಈಗಾಗಲೇ ಪಾದಯಾತ್ರೆ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಸುಮಲತಾ ಅವರಿಗೆ ಏಕೆ ಮತಹಾಕಬೇಕು ಎಂಬುದರ ಬಗ್ಗೆಯೂ ಮನದಟ್ಟು ಮಾಡುತ್ತಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಮಂಡ್ಯ ಜಿಲ್ಲೆಯ 75ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹೊರ ಜಿಲ್ಲೆಯ ಅಭ್ಯರ್ಥಿಯೊಬ್ಬರು ಪ್ರಮುಖ ಪಕ್ಷದಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು ಮಂಡ್ಯ ಜಿಲ್ಲೆಯ ಜನರು ದಡ್ಡರೆಂದು ತಿಳಿದು ಒಂದೇ ಹೆಸರಿನ ಮೂವರನ್ನು ಕಣಕ್ಕಿಳಿಸಿ ಮಂಡ್ಯದ ಆಡಳಿತದ ಚುಕ್ಕಾಣಿಯನ್ನು ಮಂಡ್ಯ ಮಣ್ಣಿನ ಮಕ್ಕಳಿಂದ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಮಂಡ್ಯ ಮಣ್ಣಿನ ಸೊಸೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸುವ ಮೂಲಕ ಮಂಡ್ಯದ ಆಡಳಿತವನ್ನು ಬೇರೆ ಜಿಲ್ಲೆಯವರಿಗೆ ನೀಡದೇ ನಮ್ಮ ಸಕ್ಕರೆ ಜಿಲ್ಲೆಯ ಸ್ವಾಭಿಮಾನವನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಜಿಲ್ಲೆಯ ಸ್ವಾಭಿಮಾನದ ಉಳಿವಿಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದಾದ್ಯಂತ ಪಾದಯಾತ್ರೆ ಮಾಡಿ ಮತದಾರರು ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಿರುವ ಅವರು, ಜಿಲ್ಲೆಯ ಧೀಮಂತ ನಾಯಕರಾದ ಹೆಚ್.ಕೆ.ವೀರಣ್ಣಗೌಡ, ಕೆ.ವಿ.ಶಂಕರೇಗೌಡ, ಸಾಹುಕಾರ್ ಚನ್ನೇಗೌಡ, ಎಂ.ಕೆ.ಬೊಮ್ಮೇಗೌಡ, ಎಸ್.ಎಂ.ಲಿಂಗಪ್ಪ, ಜಿ.ಮಾದೇಗೌಡ, ಚೌಡಯ್ಯ, ಮರಿಯಪ್ಪ, ಚಿಗರೀಗೌಡ, ಕೆ.ಆರ್.ಪೇಟೆ ಕೃಷ್ಣ, ಸಿಂಗಾರಿಗೌಡ, ಎಸ್.ಡಿ.ಜಯರಾಂ, ಕೆ.ಎಸ್.ಪುಟ್ಟಣ್ಣಯ್ಯ, ಕೆ.ಎನ್.ನಾಗೇಗೌಡ, ಎಸ್.ಎಂ.ಕೃಷ್ಣ, ಕೆ.ಕೆಂಪೇಗೌಡ, ಹಲಗೇಗೌಡ, ನೀಲೇಗೌಡ ಮುಂತಾದ ಮಹನೀಯರು ಪ್ರತಿನಿಧಿಸಿರುವ ಗಂಡು ಮೆಟ್ಟಿನ ಸಕ್ಕರೆ ನಾಡನ ಬಗ್ಗೆ ಏನೊಂದು ತಿಳಿಯದ ಇನ್ನೂ 27ರ ಯುವಕ ನಿಖಿಲ್ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ತಂದು ನಿಲ್ಲಿಸುವ ಮೂಲಕ ಮಂಡ್ಯ ಜಿಲ್ಲೆಯ ಜನರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಡವಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಅಭಿವೃದ್ಧಿ ಮಾಡಬೇಕೆಂದಿದ್ದರೆ ಮಂಡ್ಯ ಜಿಲ್ಲೆಯ ಸಾಮಾನ್ಯ ಜೆಡಿಎಸ್ ಕಾರ್ಯಕರ್ತರನ್ನು ಲೋಕಸಭೆಗೆ ಕಳುಹಿಸಬಹುದಿತ್ತು. ಆದರೆ ಮಂಡ್ಯ ಜಿಲ್ಲೆಯ ಸಂಪೂರ್ಣ ಅಧಿಕಾರವನ್ನು ತಮ್ಮ ಕುಟುಂಬದ ಹಿಡಿತಕ್ಕೆ ತೆಗೆದುಕೊಳ್ಳಲು ತಮ್ಮ ಪುತ್ರನನ್ನು ಕಣಕ್ಕಿಳಿಸಿರುವುದು ಸರಿಯಲ್ಲ.
ಮುಖ್ಯಮಂತ್ರಿಗಳು ಜಿಲ್ಲೆಯ ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಪಕ್ಷಕ್ಕೆ ಸೇರಿರುವ ಶಾಸಕರನ್ನು ಜಿಲ್ಲೆಯ ಮತದಾರರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟಿದ್ದರೂ ಯಾವುದೇ ಅಭಿವೃದ್ಧಿ ಕೆಲಸ-ಕಾರ್ಯಗಳನ್ನು ಅನುಷ್ಠಾನಗೊಳಿಸಲು ವಿಫಲವಾಗಿದ್ದಾರೆ. ಹಾಗಾಗಿ ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಮತದಾರರು ಜಿಲ್ಲೆಯ ಅಜಾತಶತೃ ಕಲಿಯುಗ ಕರ್ಣ ರೆಬೆಲ್ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾಅಂಬರೀಶ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.