ಕಾಸರಗೋಡು: ವೃದ್ಧಮಂದಿರದಲ್ಲಿ ತಂಗಿದ್ದ ವೃದ್ಧೆಯನ್ನು ಆಕೆಯ ಸಂಬಂಧಿಕರನ್ನು ಪತ್ತೆ ಮಾಡಿ ಅವರ ವಶಕ್ಕೆ ಒಪ್ಪಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡು ಸರಕಾರಿ ವೃದ್ಧಸದನದಲ್ಲಿ ಆಶ್ರಯ ಪಡೆದಿದ್ದ ಮಣಿಯಮ್ಮ(75) ಅವರನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು. 2018 ಡಿಸೆಂಬರ್ ತಿಂಗಳಲ್ಲಿ ಪಿಂಕ್ ಪೊಲೀಸರ(ಮಹಿಳೆಯರಿಗೆ ಸಹಾಯ ಒದಗಿಸುವ ಮಹಿಳಾ ಪೊಲೀಸ್ ದಳ) ಸಹಾಯದಿಂದ ಸರಕಾರಿ ವೃದ್ಧ ಮಂದಿರ ಸೇರಿದ್ದರು.
ತಮಿಳುನಾಡಿನಿಂದ ಬಸ್ ಮೂಲಕ ಬೆಂಗಳೂರಿನಲ್ಲಿರುವ ಪುತ್ರಿಯ ಮನೆಗೆ ತೆರಳುವ ದಾರಿ ಮಧ್ಯೆ ಕಾಸರಗೋಡಿನಲ್ಲಿ ಇಳಿದ ಮೂಲಕ ಅವರು ಯಾತ್ರೆಯಿಂದ ಕಳಚಿಕೊಂಡಿದ್ದರು. ನಂತರ ಅನಾಥ ಸ್ಥಿತಿಯಲ್ಲಿ ಕಂಡು ಬಂದ ಅವರನ್ನು ಪಿಂಕ್ ಪೊಲೀಸರು ವೃದ್ಧ ಮಂದಿರಕ್ಕೆ ಸೇರಿಸಿದ್ದರು.
ತಮ್ಮ ಊರಿನ ಬಗ್ಗೆ, ಸಂಬಂಧಿಕರ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗದಷ್ಟು ದುರ್ಬಲರಾದ ಹಿನ್ನೆಲೆಯಲ್ಲಿ ಇವರ ವಿಳಾಸ ಪತ್ತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಷ್ಟ ಸಾಧ್ಯವಾಗಿತ್ತು. ಕಾಸರಗೋಡು ಕಾನೂನು ಸೇವಾ ಪ್ರಾಧಿಕಾರ ಮತ್ತು ವೃದ್ಧ ಮಂದಿರದ ಅಧಿಕಾರಿಗಳು ನಡೆಸಿದ ಯತ್ನದ ಫಲವಾಗಿ ತಮಿಳುನಾಡಿನ ತಿಟ್ಟುಗಟ್ಟಿ ಪೊಲೀಸರ ಸಹಾಯದಿಂದ ನಡೆದ ತನಿಖೆಯಲ್ಲಿ ಮಣಿಯಮ್ಮ ಅವರ ವಿಳಾಸ ಮತ್ತು ಸಂಬಂಧಿಕರ ಪತ್ತೆಯಾಗಿದೆ.
ಮಣಿಯಮ್ಮ ಅವರನ್ನು ಸಂಬಂಧಿಕರಿಗೆ ಒಪ್ಪಿಸುವ ಸಂಬಂಧ ಕಾಸರಗೋಡು ಕಾನೂನು ಸೇವಾ ಪ್ರಾಧಿಕಾರ ಕಚೇರಿಯಲ್ಲಿ ಸಭೆ ನಡೆಯಿತು. ಜಿಲ್ಲಾ ನ್ಯಾಯಮೂರ್ತಿ ಎಸ್.ಮನೋಹರ್ ಕಿಣಿ ಅವರು ಮಣಿಯಮ್ಮ ಅವರನ್ನು ಪುತ್ರಿಗೆ ಒಪ್ಪಿಸಿದ್ದಾರೆ. ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶನ್ ಪಿ.ಟಿ., ವೃದ್ಧ ಮಂದಿರ ವರಿಷ್ಠಾಧಿಕಾರಿ ಪಂಕಜಾಕ್ಷನ್ ಪಿ.ಎಂ., ಮೊದಲಾದವರು ಉಪಸ್ಥಿತರಿದ್ದರು.