News Kannada
Saturday, November 26 2022

ಕರ್ನಾಟಕ

ಮಡಿಕೇರಿಯಲ್ಲಿ ಮಳೆಗಾಲದ ಆತಂಕ ಶುರು - 1 min read

Photo Credit :

ಮಡಿಕೇರಿಯಲ್ಲಿ ಮಳೆಗಾಲದ ಆತಂಕ ಶುರು

ಮಡಿಕೇರಿ: ಕಳೆದ ವರ್ಷ ಸುರಿದ ಮಹಾಮಳೆಯ ಕರಿಛಾಯೆ ಮಾಸುವ ಮುನ್ನವೇ ಮತ್ತೊಂದು ಮಳೆಗಾಲ ಸಮೀಪಿಸಿದೆ.

ಮುಂಗಾರು ಆರಂಭಕ್ಕೆ ಇನ್ನು ಒಂದು ತಿಂಗಳಷ್ಟೇ ಬಾಕಿ ಉಳಿದಿದ್ದು, ಬೆಟ್ಟ, ಗುಡ್ಡಗಳಿಂದ ಆವೃತವಾಗಿರುವ ಮಡಿಕೇರಿ ನಗರದಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಈ ಬಾರಿಯೂ ಅತಿಮಳೆಯಾಗಿ ಅನಾಹುತಗಳು ಸಂಭವಿಸಬಹುದೆನ್ನುವ ಭಯವನ್ನು ವ್ಯಕ್ತಪಡಿಸಿರುವ ಸಾರ್ವಜನಿಕರು, ತಕ್ಷಣ ಜಿಲ್ಲಾಡಳಿತ ಹಾಗೂ ನಗರಸಭೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಶಿವರಾಜ್ ಅವರನ್ನು ಭೇಟಿಯಾದ ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ನಗರದೊಳಗಿನ ಜಟಿಲ ಸಮಸ್ಯೆಗಳು ಮತ್ತು ಮಳೆಗಾಲದಲ್ಲಿ ಅಪಾಯಕ್ಕೆ ಸಿಲುಕುವ ಬಡಾವಣೆಗಳ ಬಗ್ಗೆ ಮಾಹಿತಿ ನೀಡಿದರು.

ಡಿಎಆರ್ ವಸತಿ ಗೃಹ ಹಾಗೂ ರೈಫಲ್ ರೇಂಜ್ ವ್ಯಾಪ್ತಿಯಲ್ಲಿ ಕೊಳಚೆ ನೀರು ಹರಿಯುವ ತೋಡಿನಲ್ಲಿ ಹೂಳು ತುಂಬಿ, ಕಾಡುಗಿಡಗಳು ಬೆಳೆದುಕೊಂಡಿವೆ. ಸರಾಗವಾಗಿ ನೀರು ಹರಿಯದೆ ದುರ್ವಾಸನೆ ವ್ಯಾಪಿಸಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಇದೇ ಭಾಗದ ಬ್ಲಾಕ್ ನಂ.14 ರ ಪ್ರದೇಶದಲ್ಲಿ ತೋಡುಗಳು ತುಂಬಿ ಅದರ ಅಕ್ಕಪಕ್ಕದ ಜಾಗದಲ್ಲಿ ಭೂ ಕುಸಿತಗಳು ಉಂಟಾಗಿತ್ತು. ಆದರೆ ಮತ್ತೊಂದು ಮಳೆಗಾಲ ಸಮೀಪಿಸಿದರೂ ಹೂಳು ತೆಗೆಯುವ ಕಾರ್ಯವನ್ನು ಕೈಗೊಂಡಿಲ್ಲ. ಇದರಿಂದ ಕೊಳಚೆ ನೀರು ಹರಿಯದೆ ನಿಂತಲ್ಲೇ ನಿಂತಿದೆ, ಅಲ್ಲದೆ ಈ ಬಾರಿ ಮಳೆಯ ನೀರು ಹರಿಯಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ತೋಡಿನ ತ್ಯಾಜ್ಯ ತೆಗೆದು ಕಾಡುಗಿಡಗಳನ್ನು ಕಡಿದು ಶುಚಿಗೊಳಿಸದಿದ್ದಲ್ಲಿ ಮಳೆಗಾಲದಲ್ಲಿ ಅಪಾಯ ಕಾದಿದೆ ಎಂದು ಪ್ರಮುಖರು ಎಡಿಸಿ ಬಳಿ ಆತಂಕ ವ್ಯಕ್ತಪಡಿಸಿದರು.

ಇದೇ ವಾರ್ಡ್‍ನ ಬಡಾವಣೆಗಳ ಚರಂಡಿಗಳು ಕೂಡ ಅಸರ್ಪಕವಾಗಿದ್ದು, ತ್ಯಾಜ್ಯ ತುಂಬಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಒಂದು ವೇಳೆ ಕಳೆದ ವರ್ಷದಷ್ಟೇ ಮಳೆ ಸುರಿದರೆ ಚರಂಡಿ ಮತ್ತು ತೋಡಿನ ನೀರು ಉಕ್ಕಿ ಹರಿದು ಸುತ್ತಮುತ್ತಲ ಮನೆಗಳು ಜಲಾವ್ರತಗೊಳ್ಳಲಿವೆ ಎಂದು ಸ್ಥಳೀಯ ನಿವಾಸಿಗಳು ಗಮನ ಸೆಳೆದರು.

ನಗರಸಭೆ ವ್ಯಾಪ್ತಿಯ ಸುಬ್ರಮಣ್ಯ ನಗರ, ಮುಳಿಯ ಓಂಕಾರ ಬಡಾವಣೆ, ರೈಫಲ್ ರೇಂಜ್, ಕನ್ನಿಕಾ ಬಡಾವಣೆ, ಪ್ರಕಾಶ ಬಡಾವಣೆ, ಕಾವೇರಿ ಬಡಾವಣೆ, ವಿದ್ಯಾನಗರ, ಐಟಿಐ ಹಿಂಭಾಗ, ಫೀ.ಮಾ.ಕಾರ್ಯಪ್ಪ ಕಾಲೇಜು ಹಿಂಭಾಗ, ಹಿಮವನ ಬಡಾವಣೆಗಳಲ್ಲಿ ಕಳೆದ ಮಳೆಗಾಲದಲ್ಲಿ ಭೂಕುಸಿತ ಉಂಟಾಗಿದೆ ಮತ್ತು ಮನೆಗಳು ಜಲಾವ್ರತಗೊಂಡಿವೆ. ಇದರಿಂದ ಹಾನಿಗೊಳಗಾದ ಮನೆಗಳ ಮಾಲೀಕರು ಮನೆಯ ಹಿಂಭಾಗ ಮತ್ತು ಮುಂಭಾಗ ತಡೆಗೋಡೆ ಕಟ್ಟಲು ಅನಾಹುತ ಸಂಭವಿಸಿದ ದಿನದಿಂದಲೂ ಜಿಲ್ಲಾಡಳಿತ ಹಾಗೂ ನಗರಸಭೆಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೆ ಯಾರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಮಳೆಗಾಲದಲ್ಲಿ ನಗರದ ಹಳೆಯ ಬಸಪ್ಪ ಚಿತ್ರಮಂದಿರದ ಪಕ್ಕದಲ್ಲಿರುವ ಡೋಬಿ ಘಾಟ್‍ನಿಂದ ಗಲ್ಫ್‍ ಕ್ಲಬ್ ವರೆಗಿನ ಪ್ರದೇಶದ ತೋಡುಗಳ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ ನೀರು ಹರಿಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಲ್ಲಿನ ಹೂಳು ಮತ್ತು ಕುಸಿದ ಮಣ್ಣನ್ನು ತೆರವುಗೊಳಿಸುವ ಕಾರ್ಯವನ್ನು ಇಲ್ಲಿಯವರೆಗೆ ಕೈಗೊಂಡಿಲ್ಲ. ಮಳೆಗಾಲ ಮುಗಿದ ತಕ್ಷಣ ಇಲ್ಲಿ ಸಂಭವಿಸಿದ ಅನಾಹುತಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಸ್ಥಳೀಯರು ನೀಡಿದ ದೂರಿಗೂ ಸ್ಪಂದನೆ ದೊರೆತ್ತಿಲ್ಲ. ಇದೀಗ ಮಳೆಗಾಲ ಸಮೀಪಿಸುತ್ತಿದ್ದು, ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ತೋಡು ಮತ್ತು ಚರಂಡಿಗಳನ್ನು ಆವರಿಸಿರುವ ತ್ಯಾಜ್ಯಗಳನ್ನು ಹಾಗೂ ಕಾಡುಗಿಡಗಳನ್ನು ಇರುವ ಒಂದು ತಿಂಗಳಿನಲ್ಲಿ ತೆರವುಗೊಳಿಸಿ ನೀರು ಹರಿಯಲು ಸುಗಮ ವ್ಯವಸ್ಥೆ ಕಲ್ಪಿಸದೇ ಇದಲ್ಲಿ ಮಳೆಗಾಲದಲ್ಲಿ ಅನಾಹುತಗಳು ಎದುರಾಗುವುದು ಖಚಿತವೆಂದು ಪ್ರಮುಖರು ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ. ಮಳೆಗಾಲ ಆರಂಭಕ್ಕೂ ಮೊದಲು ನಗರದೊಳಗಿನ ಅಪಾಯಕಾರಿ ಪ್ರದೇಶಗಳನ್ನು ಸಮೀಕ್ಷೆ ಮಾಡಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ನೀರು ಹರಿಯಲು ಅಡ್ಡಿಯಾಗಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛ ಪರಿಸರವನ್ನು ಸೃಷ್ಟಿಸಬೇಕು ಎಂದು ಎಡಿಸಿ ಬಳಿ ಮನವಿ ಮಾಡಿದರು.

See also  ಬಲೆಗೆ ಬಿತ್ತು ಮೀನುಗಳು.. ಸಾಂಪ್ರದಾಯಿಕ ಮೀನುಗಾರರಲ್ಲಿ ಹರ್ಷ

ಲೋಕಾಯುಕ್ತರಿಗೆ ದೂರು: ಕಳೆದ ವರ್ಷ ಪ್ರಕೃತಿ ವಿಕೋಪದ ಸಂದರ್ಭ ಭಾಗಶಃ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಹೊಸದಾಗಿ ಮನೆಯ ನಿರ್ಮಾಣ, ಮನೆಯ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳದೆ ಮತ್ತು ಮನೆ ನಿರ್ಮಾಣಕ್ಕೆ ನಿವೇಶನವನ್ನು ಗುರುತಿಸದೆ ಸತಾಯಿಸಲಾಗುತ್ತಿದೆ. ಅಗತ್ಯ ಕಾಮಗಾರಿಗಳಿಗೆ ಹಣ ಮಂಜೂರು ಮಾಡದೆ ನಿರ್ಲಕ್ಷ್ಯ ವಹಿಸಿರುವುದರಿಂದ ಸಂತ್ರಸ್ತರ ಸ್ಥಿತಿ ಅಯೋಮಯವಾಗಿದೆ ಎಂದು ಪ್ರಮುಖರು ಆರೋಪಿಸಿದರು. ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
ಅತಿವೃಷ್ಟಿ ಹಾನಿಯ ಕಾಮಗಾರಿಗಳಿಗಾಗಿ ಸಾಕಷ್ಟು ಅನುದಾನವನ್ನು ಸರ್ಕಾರ ನೀಡಿದೆ. ಆದರೆ ಇಲ್ಲಿಯವರೆಗೆ ಕಳೆದ ವರ್ಷದ ಭೂಕುಸಿತದ ಮಣ್ಣನ್ನೇ ತೆರವುಗೊಳಿಸದೆ ಇರುವುದನ್ನು ಗಮನಿಸಿದರೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ವಿವಿಧ ಬಡಾವಣೆಗಳ ನಿವಾಸಿಗಳ ಸಹಿ ಇರುವ ಮನವಿ ಪತ್ರವನ್ನು ಪ್ರಮುಖರು ಎಡಿಸಿ ಶಿವರಾಜ್ ಅವರಿಗೆ ನೀಡಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿಕೊಂಡರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಯ್ಯಪ್ಪ, ನಗರಸಭೆಯ ಮಾಜಿ ಸದಸ್ಯ ಸುನಿಲ್ ನಂಜಪ್ಪ, ಮಡಿಕೇರಿ ನಗರ ಕಾಂಗ್ರೆಸ್ಸಿನ ಉಪಾಧ್ಯಕ್ಷ ಎಂ.ಸುದಯ್ ನಾಣಯ್ಯ, ನಗರ ಜಾತ್ಯತೀತ ಜನತಾದಳದ ಪ್ರಧಾನ ಕಾರ್ಯದರ್ಶಿ ಕೊಟ್ಟಕೇರಿಯನ ಅಜಿತ್ ಹಾಗೂ ಉದ್ಯಮಿ ಮತ್ತು ರೈಫಲ್ ರೇಂಜ್ ನಿವಾಸಿ ಬಿ.ಎಸ್.ಹರಿಶ್ಚಂದ್ರ ಮತ್ತಿತರ ಪ್ರಮುಖರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು