News Kannada
Saturday, December 03 2022

ಕರ್ನಾಟಕ

ಕಾಳಿ ನದಿ ತಿರುವಿಗೆ ಯತ್ನ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಿರೋಧ

Photo Credit :

ಕಾಳಿ ನದಿ ತಿರುವಿಗೆ ಯತ್ನ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಿರೋಧ

ಕಾರವಾರ: ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಘಟಪ್ರಭಾ ಮತ್ತು ಮಲಪ್ರಭಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೀವನದಿ ಎಂದೇ ಕರೆಯಲ್ಪಡುವ ಕಾಳಿ ಈ ಮೂರು ನದಿಗಳ ಜೋಡಣೆ ಬಗ್ಗೆ ಸಲ್ಲಿಸಲಾಗಿದ್ದ ಸಂಗಮೇಶ ನಿರಾಣಿ ವರದಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ಕೆಲವು ಸಂಘಟನೆಗಳು ನಡೆಸುತ್ತಿರುವ ಪ್ರಯತ್ನಕ್ಕೆ ಜಿಲ್ಲೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಡಿಗ್ಗಿಯಲ್ಲಿ ಉಗಮವಾಗಿ ಕಾರವಾರದಲ್ಲಿ ಅರಬ್ಬೀ ಸಮುದ್ರವನ್ನು ಸೇರುವ ಈ ನದಿಗೆ ಅಡ್ಡಲಾಗಿ ಐದು ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಅತ್ಯಂತ ಸೂಕ್ಷ್ಮ ಜೀವವಲಯವಾದ ಮಧ್ಯ ಪಶ್ಚಿಮ ಘಟ್ಟದ ಪ್ರದೇಶದಿಂದ ಈ ನದಿಯು ಹಾದು ಹೋಗುತ್ತದೆ. ಇಂತಹ ನದಿಯನ್ನು ತಿರುಗಿಸಲು ಪ್ರಯತ್ನಿಸುತ್ತಿರುವುದು ಅತ್ಯಂತ ಅಪಾಯಕಾರಿ ಎಂಬ ಬಹುತೇಕ ಪರಿಸರವಾದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯಕ್ಕೆ ಮಾತ್ರವಲ್ಲದೇ ನೆರೆಯ ಗೋವಾ ರಾಜ್ಯಕ್ಕೂ ಬೆಳಕನ್ನು ನೀಡುವ, ಪಶ್ಚಿಮ ಘಟ್ಟದ ಅಪಾರ ವನ್ಯ ಜೀವಿಗಳಿಗೆ ದಾಹವನ್ನು ನೀಗಿಸುತ್ತಿರುವ, ಹಲವಾರು ಗ್ರಾಮಗಳ ಜನರಿಗೆ ನೀರನ್ನು ಒದಗಿಸುತ್ತಿರುವ ಕಾಳಿ ನದಿಯನ್ನು ಬಯಲು ಸೀಮೆಯತ್ತ  ತಿರುಗಿಸುವ ಈ ಪ್ರಯತ್ನದಿಂದಾಗಿ ಎತ್ತಿನ ಹೊಳೆಯಂತೆ ಜಿಲ್ಲೆಯಲ್ಲೂ ಹೋರಾಟಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕಾಳಿ ನದಿಯ ನೀರು ಕೈಗಾ ಅಣುವಿದ್ಯುತ್ ಕೇಂದ್ರದ ರಿಯಾಕ್ಟರ್‌ನಲ್ಲಿ ತಂಪು ಪ್ರಕ್ರಿಯೆಗಾಗಿ ಬಳಸಲಾಗುತ್ತಿದೆ. ಈ ನದಿಗೆ ಅಡ್ಡಲಾಗಿ ಕಟ್ಟಿದ ಆಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಬಳಸುತ್ತಿದ್ದಾರೆ. ಜೊಯಿಡಾ, ದಾಂಡೇಲಿ ಕಾರವಾರ ಭಾಗದ ಕಾಡುಗಳಲ್ಲಿ ಪ್ರಾಣಿಗಳ ಕುಡಿಯುವ ನೀರಿಗೂ ಬಳಕೆಯಾಗುತ್ತಿದ್ದು, ಈ ನದಿಯನ್ನು ತಿರುಗಿಸಿ ಒಣಗುವಂತೆ ಮಾಡಿದರೆ ಕೈಗಾ ಹಾಗೂ ಕಾಳಿ ವಿದ್ಯುತ್ ಯೋಜನೆಗಳನ್ನೇ ನಿಲ್ಲಿಸಬೇಕಾದಿತು. ಅಲ್ಲದೇ ಕಾಡು ಪ್ರಾಣಿಗಳು ಜಲಕ್ಷಾಮದಿಂದ ನಾಶವಾಗಲಿದೆ.  

ಕಾಳಿ ನದಿಯ ನೀರು ಅರಬ್ಬೀ ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತದೆ ಎಂಬ ವಾದ ಮಂಡಿಸುತ್ತಿರುವವರಿಗೆ ಸಮುದ್ರದ ಲಕ್ಷಣಗಳ ಕಿಂಚಿತ್ತು ಜ್ಞಾನವಿಲ್ಲ ಎನಿಸುತ್ತದೆ ಎಂದು ಕಾಳಿ ಉಳಿಸಿ ಸಂಘಟನೆಯ ಎನ್. ದತ್ತಾ ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಈ ವಿಚಾರವು ಕಾಳಿ ನದಿಯನ್ನು ತಿರುಗಿಸಿ ಬಯಲು ಸೀಮೆಗೆ ಕೊಂಡೊಯ್ಯಲು ವರದಿಯನ್ನು ಮಂಡಿಸಿದ ಸಂಗಮೇಶ ನಿರಾಣಿಯವರಿಗೆ ತಿಳಿದಿಲ್ಲದಿರುವುದು ವಿಷಾದನೀಯ ಎಂದು ಗಣೇಶ ಹೆಗಡೆ ಆತಂಕ ವ್ಯಕ್ತ ಪಡಿಸಿದ್ದಾರೆ.

ಭಾರತಕ್ಕೆ ಮುಂಗಾರು ಮಳೆಯನ್ನು ತರುವ ಅತ್ಯಂತ ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟವನ್ನು ಪಾರಂಪರಿಕ ತಾಣವೆಂದು ಯುನೆಸ್ಕೊ ಈಗಾಗಲೇ ಘೋಷಿಸಿದೆ. ಈ ಭಾಗದಲಿ ರೈಲು ಮಾರ್ಗವನ್ನು ನಿರ್ಮಿಸಲು ಕೂಡ ಸಾಧ್ಯವಿಲ್ಲದಿರುವಾಗ ಇಡೀ ನದಿಯನ್ನೇ ತಿರುಗಿಸಿಕೊಂಡು ಬಯಲು ಸೀಮೆಯತ್ತ ಒಯ್ಯುವುದು ಪರಿಸರದ ಮೇಲೆ ತೀವ್ರ ಪರಿಣಾಮಕ್ಕೆ ಕಾರಣವಾಗುತ್ತದೆ. ಹೀಗಾಗಿ ಇಂಥ ಯಾವುದೇ ಪ್ರಯತ್ನಕ್ಕೂ ತೀವ್ರ ವಿರೋಧ ವ್ಯಕ್ತಪಡಿಸುತ್ತೇವೆ ಹಾಗೂ ಕಾಳಿ ನದಿ ನೀರನ್ನು ಉಳಿಸಿಕೊಳ್ಳಲು ತಾವು ಯಾವುದೇ ಹೋರಾಟಕ್ಕೆ ಸಿದ್ದ ಎಂದು ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

See also  ಸಾದ್ವಿ ಬಾಲಿಕಾ ವಿರುದ್ಧ ಜಾಮೀನು ರಹಿತ ಮೊಕದ್ದಮೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು