ಕಾರವಾರ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಶಾಲಾ ದಾಖಲಾತಿ ಆಂದೋಲನವನ್ನು ಇತರೆ ಇಲಾಖೆಗಳ ಸಹಯೋಗದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಯಶಸ್ವಿಯಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶಾಲೆ ಕಡೆ ನನ್ನ ನಡೆ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಜನಾಂದೋಲನದಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮನೆ ಮನೆ ಬೇಟಿ ನೀಡಿ ಮಕ್ಕಳನ್ನು ಶಾಲೆ ಕರೆತರಬೇಕು. ಅಲ್ಲದೇ ಜನಪ್ರತಿನಿಧಿಗಳು ಮತ್ತು ಗಣ್ಯ ವ್ಯಕ್ತಿಗಳ ನೇತೃತ್ವದಲ್ಲಿ ಶಾಲಾ ದಾಖಲಾತಿ ಆಂದೋಲನವನ್ನು ಹಮ್ಮಿಕೊಂಡರೆ ಪಾಲಕರು ಮತ್ತು ಮಕ್ಕಳು ಆಕರ್ಷಿತರಾಗಿ ಶಾಲೆಗೆ ಮರಳುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು.
ಜಿ.ಪಂ ಸಿಇಒ ಎಮ್. ರೋಶನ್ ಅವರು ಮಾತನಾಡಿ, ಶಿಕ್ಷಣವು ಪ್ರತಿ ಮಗುವಿನ ಮೂಲಭೂತ ಹಕ್ಕಾಗಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಅನ್ಯ ರಾಜ್ಯಗಳಿಂದ ಬಂದಂತಹ ಕೂಲಿ ಕಾರ್ಮಿಕರ ಮಕ್ಕಳು ಕೂಡಾ ಶಿಕ್ಷಣ ಪಡೆಯಬೇಕು. ಈ ಹಿನ್ನೆಲೆಯಲ್ಲಿ ವಲಸೆ ಮಕ್ಕಳನ್ನು ಗುರುತಿಸಿ ಅವರ ಮಾತೃ ಭಾಷೆಯಲ್ಲಿ ಬ್ರಿಡ್ಜ್ ಕೋರ್ಸ್ ಕೊಟ್ಟು ಶಿಕ್ಷಣ ನೀಡಬೇಕೆಂದರು. ಮೇ 27ರಂದು ಬ್ಲಾಕ್ ಮಟ್ಟ ಮತ್ತು 28 ರಂದು ಶಾಲಾ ಮಟ್ಟದಲ್ಲಿ ಸಭೆ ನಡೆಸಿ ಮೇ 29ರಂದು ಶಾಲೆ ಕಡೆ ನನ್ನ ನಡೆ ಜನಾಂದೋಲನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ. ಅಶೋಕ ಕುಮಾರ, ಡಿಡಿಪಿಐ ಸೇರಿದಂತೆ ಇತರರು ಇದ್ದರು.