ಮಡಿಕೇರಿ: ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿಯನ್ನು ಆರಂಭಿಸುತ್ತಿರುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ, ಮೇ 30ರಂದು ಬೆಂಗಳೂರಿನಲ್ಲಿ ನಡೆಯುವ ವಿಧಾನಸೌಧ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಚೇಂದಿರ ಕಾವೇರಮ್ಮ, ಸರ್ಕಾರದ ಒಂದು ಸಂಸ್ಥೆಯನ್ನು ಸಬಲಗೊಳಿಸಲು ಮತ್ತೊಂದು ಸಂಸ್ಥೆಯನ್ನು ಬಲಹೀನಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿಯನ್ನು ಆರಂಭಿಸಿದರೆ ಮಕ್ಕಳ ಕೊರತೆಯಿಂದ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಬಹುದು. ಇದರಿಂದ ರಾಜ್ಯದ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1 ಲಕ್ಷಕ್ಕೂ ಅಧಿಕ ಮಂದಿ ನೌಕರರು ಬೀದಿ ಪಾಲಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಿಗೆ ಬದಲಾಗಿ ಅಂಗನವಾಡಿಗಳಲ್ಲೇ ಎಲ್ಕೆಜಿ ಮತ್ತು ಯುಕೆಜಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದ ಅವರು, ಮೇ 30 ರಂದು ಜಿಲ್ಲೆಯ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಬೆಂಗಳೂರಿನ ಹೋರಾಟದಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.
ಎಲ್ಕೆಜಿ ಮತ್ತು ಯುಕೆಜಿಯನ್ನು ಆರಂಭಿಸುವ ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ತಜ್ಞರು ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಆದರೆ, ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆಯೆಂದು ಕಾವೇರಮ್ಮ ಟೀಕಿಸಿದರು. ಅಂಗನವಾಡಿ ಕೇಂದ್ರಗಳನ್ನು 3 ರಿಂದ 6 ವರ್ಷದ ಮಕ್ಕಳಿಗಾಗಿಯೇ ಆರಂಭಿಸಲಾಗಿದೆ. ಆದರೆ, ಇದೀಗ ಹೊಸದಾಗಿ ಸರ್ಕಾರಿ ಶಾಲೆಯಲ್ಲೆ ಎಲ್ಕೆಜಿ ಮತ್ತು ಯುಕೆಜಿ ಆರಂಭಗೊಂಡರೆ ಅಂಗನವಾಡಿಗಳಿಗೆ ಮಕ್ಕಳ ಕೊರತೆ ಎದುರಾಗಲಿದೆ. ಈಗ ಇರುವ ವ್ಯವಸ್ಥೆಯನ್ನು ಬಲಿಷ್ಟಗೊಳಿಸುವ ಬದಲು, ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವ ರೀತಿಯಲ್ಲಿ ಮತ್ತೊಂದು ಯೋಜನೆ ಜಾರಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲವೆಂದು ಕಾವೇರಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಿತ್ರ ವಿ.ಎಸ್. ಹಾಗೂ ವೀರಾಜಪೇಟೆ ಕಾರ್ಯದರ್ಶಿ ವಿ.ಸಿ. ನಳಿನಾಕ್ಷಿ ಉಪಸ್ಥಿತರಿದ್ದರು.