ಕಾರವಾರ: ಜಿಲ್ಲೆಯಲ್ಲಿ ನಿತ್ಯವೂ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಅಪರಾಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಫೈನಾನ್ಸ್ ಕಂಪನಿಯೊಂದಿಗೆ ವ್ಯವಹಾರ ನಡೆಸಲು ನೋಂದಣಿಗೆ ೧೦ ರೂ. ಪಾವತಿಸಲು ಫೋನ್ ಪೇ ಸಂಖ್ಯೆ ಹಾಗೂ ಓಟಿಪಿ ನೀಡಿ ಸಾವಿರಾರು ರೂ. ಶಿರಸಿ ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ರಸ್ತೆಯಲ್ಲಿ ಇರುವ ನ್ಯೂ ಶ್ರೀರಾಮ ವುಡ್ ವಕ್ಸ್ ಎಂಬ ಹೆಸರಿನ ಫರ್ನಿಚರ್ ಅಂಗಡಿಯ ಮಾಲಿಕ ವಿಕ್ರಮ ಮಂಜುನಾಥ ಗಂಗಾವಳಕರ ಗ್ರಾಹಕರಿಗೆ ಇ.ಎಂ.ಐ. ವ್ಯವಸ್ಥೆಯಲ್ಲಿ ಫರ್ನಿಚರ್ ಮಾರಾಟ ಮಾಡುವ ಉದ್ದೇಶದಿಂದ ಬಜಾಜ್ ಫೈನಾನ್ಸ್ ಲಿಮಿಟೆಡ್ ಜೊತೆಗೆ ಟೈ ಆಫ್ ಮಾಡಿಕೊಳ್ಳಲು ಬಯಸಿದ್ದಾರೆ. ಹೀಗಾಗಿ ಹತ್ತಿರದ ಹಾವೇರಿ ಜಿಲ್ಲೆಯಲ್ಲಿರುವ ಬಜಾಜ್ ಫೈನಾನ್ಸ್ ಕಚೇರಿಗೆ ಸಂಪರ್ಕಿಸಲು ಅವರ ದೂರವಾಣಿ ಸಂಖ್ಯೆಯನ್ನು ಗೂಗಲನಲ್ಲಿ ಹುಡುಕಿದಾಗ ದೊರೆತ ನಂಬರಿಗೆ ಕರೆ ಮಾಡಿದ್ದಾರೆ.
ಕರೆ ಸ್ವೀಕರಿಸಿದಾತ ತಾನು ಕಾರ್ತಿಕ ಎಂದು ಪರಿಚಯ ಮಾಡಿಸಿಕೊಂಡು ತಾನು ಬಜಾಜ್ ಫೈನಾನ್ಸ್ ಕಡೆಯಿಂದ ಕರೆ ಮಾಡುತ್ತಿದ್ದು ಇ.ಎಂ.ಐ. ಮಾಡುವ ಕುರಿತು ಅಂಗಡಿ ಮಾಲಿಕರು ವಿಚಾರಿಸಿದಾಗ ಮೊದಲು೧೦ ರೂ. ನೋಂದಣಿ ಶುಲ್ಕಪಾವತಿಸಬೇಕಾಗುತ್ತದೆ. ಇದಕ್ಕೆ ಫೋನ್ ಪೇ ನಂಬರ್ ನೀಡುವಂತೆ ಹೇಳಿದ್ದಾನೆ. ಅದರಂತೆ ನೀಡಿದ ಮೊಬೈಲ್ಗೆ ಒಂದು ಲಿಂಕನ್ನು ಕಳುಹಿಸಲಾಗಿ, ಓಪನ್ ಮಾಡುವಂತೆ ಹೇಳಿದ್ದಾನೆ. ಯು.ಪಿ.ಐ.ಡಿ ನಂಬರನ್ನು ಹೇಳಿ ಅಂತ ಹೇಳಿದ್ದು ನಂಬರ ಹೇಳಿದ ಕ್ಷಣ ಮಾತ್ರದಲ್ಲಿ ತನ್ನ ವಿಕ್ರಮ ಬ್ಯಾಂಕ್ ಖಾತೆಯಿಂದ ೧೯ ಸಾವಿರ ರೂ. ಕಳೆದುಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಬಜಾಜ್ಪೈನಾನ್ಸನ ಹಾವೇರಿ ಕಚೇರಿಯ ಅಧಿಕಾರಿಯನ್ನು ಸಂಪರ್ಕಿಸಿ ವಿಚಾರಿಸಿದಾಗ ಕಾರ್ತಿಕ ಎನ್ನುವ ವ್ಯಕ್ತಿಯು ತಮ್ಮಲ್ಲಿ ಯಾರೂ ಇಲ್ಲ ಎಂದು ತಿಳಿಸಿದ್ದು ಕಾರ್ತಿಕ ಎಂಬ ಹೆಸರಿನ ವ್ಯಕ್ತಿಯಿಂದ ತನಗೆ ಮೋಸವಾಗಿದೆಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.
ಪ್ರತ್ಯೇಕ ಪ್ರಕರಣ: ಮುಂಡಗೋಡದ ಸಂತವೃತಿ ಎನ್ನುವವರು ಅಪರಾಧ ಪೊಲೀಸ್ ಠಾಣೆಯಲ್ಲಿ ಆನ್ಲೈನ್ ವಂಚಕರು ತಮ್ಮ ಹಾಗೂ ಸ್ನೇಹಿತ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡಿದ್ದಾರೆ. ಮೇ ೩೦ ರಂದು ಸಂತವೃತಿಅವರು ಹೈದರಾಬಾದಿನಲ್ಲಿರುವ ತಮ್ಮ ಸಹೋದರನಿಗೆ ಡಿಟಿಡಿಸಿ ಕೋರಿಯರ್ ಮೂಲಕ ಲ್ಯಾಪ್ಟಾಪ್ ಒಂದನ್ನು ಕಳುಹಿಸಿದ್ದರು. ಆದರೆ ಜೂ.೪ ರಂದು ಲ್ಯಾಪ್ಟಾಪ್ ಬದಲಿಗೆ ಪೇಪರ್ ಬಂಡಲ್ ತಲುಪಿದೆ ಎನ್ನಲಾಗಿದೆ. ಈ ಕುರಿತು ಕೋರಿಯರ್ ನವರಿಗೆ ದೂರು ದಾಖಲಿಸಲು ಗೂಗಲ್ನಲ್ಲಿ ಅವರ ನಂಬರ್ ಹುಡುಕಿದ್ದಾರೆ. ಆಗ ದೊರೆತ ನಂಬರ್ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿಯು ದೂರು ದಾಖಲಿಸಲು೧೦ ರೂ.ಗಳನ್ನು ಪಾವತಿಸಬೇಕಿದ್ದು ಫೊನ್ ಪೇ ಇರುವ ನಂ. ನೀಡಲು ಹೇಳಿದ್ದಾರೆ.
ಅದರಂತೆ ಫೋನ್ ಪೇ ನಂಬರ್ ನೀಡಿದಾಗ ಮೊಬೈಲ್ಗೆ ಬಂದ ಓಟಿಪಿ ನೀಡುವಂತೆ ಕೇಳಿದ್ದಾರೆ. ಅದನ್ನೂ ಇವರು ನೀಡಿದಾಗ ಆ ವ್ಯಕ್ತಿಯು ಈ ಬ್ಯಾಂಕ್ ಲಿಂಕ್ ನಮ್ಮಲ್ಲಿ ಇಲ್ಲ, ಬೇರೆ ಯಾವುದಾದರು ನೀಡಿ ಎಂದಿದ್ದಾರೆ. ಹೀಗಾಗಿ ಸಂತವೃತಿ ಅವರು ತಮ್ಮ ಸ್ನೇಹಿತನ ಪೇಟಿಎಂ ನಂ ನೀಡಿದ್ದು ಬಳಿಕ ಅವರು ಕೇಳಿದಂತೆ ಓಟಿಪಿಯನ್ನೂ ನೀಡಿದ್ದಾರೆ. ತಕ್ಷಣದಲ್ಲಿ ಸ್ನೇಹಿತನ ಖಾತೆಯಿಂದ ೨೫ ಸಾವಿರ ರೂ. ಹಾಗೂ ತಮ್ಮ ಖಾತೆಯಿಂದಲೂ ೬೯೦೦ ರೂ. ಸೇರಿ ಒಟ್ಟೂ ೩೧,೯೦೦ ರೂ. ಕಡಿತಗೊಂಡಿದೆ ಎಂದು ದೂರಿದ್ದಾರೆ.