ಚಾಮರಾಜನಗರ: ದಲಿತ ಯುವಕನ ಬೆತ್ತಲೆ ಮೆರವಣಿಗೆ ನಡೆಸಿದ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮತ್ತು ಇತರೆ ಅಧಿಕಾರಿಗಳು ತಾಲೂಕಿನ ಕೆಬ್ಬೇಕಟ್ಟೆ ಶನೇಶ್ವರ ದೇವಾಲಯ ಹಾಗೂ ಶ್ಯಾನಡ್ರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಶನೇಶ್ವರ ದೇವಾಲಯದಲ್ಲಿ ಹಾನಿಗೊಳಗಾಗಿರುವ ವಿಗ್ರಹ ಮತ್ತು ದೇವರ ಫೋಟೋಗಳನ್ನು ವೀಕ್ಷಿಸಿದರಲ್ಲದೆ, ದೇವಾಲಯ ಸಮಿತಿ ಅಧ್ಯಕ್ಷ ಸ್ವಾಮಿಗೌಡ ಮತ್ತು ಅಲ್ಲಿಯೇ ಇದ್ದ ಅರ್ಚಕರು ಘಟನೆ ಬಗ್ಗೆ ಜಿಲ್ಲಾಧಿಕಾರಿಯವರಿಗೆ ವಿವರ ನೀಡಿದರು. ಘಟನೆ ಯಾವ ಸಮಯದಲ್ಲಿ ಜರುಗಿತು. ಆ ವೇಳೆ ಯಾರೆಲ್ಲ ಸ್ಥಳದಲ್ಲಿದ್ದರು. ಸಂತ್ರಸ್ತ ವ್ಯಕ್ತಿ ಇಲ್ಲಿಗೆ ಬರಲು ಕಾರಣವೇನು? ಎಂಬೆಲ್ಲ ಪ್ರಶ್ನೆಗಳನ್ನು ಜಿಲ್ಲಾಧಿಕಾರಿಯವರು ಮುಂದಿಟ್ಟರು. ಘಟನೆಯ ತನಿಖಾಧಿಕಾರಿಯೂ ಆಗಿರುವ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಕೆಲವು ಪ್ರಶ್ನಾರ್ಥಕ ವಿಷಯಗಳ ಬಗ್ಗೆ ವಿವರ ನೀಡಿದರು.
ಬಳಿಕ ಶ್ಯಾನಡ್ರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ಯುವಕನ ಸಂಬಂಧಿಕರು ಮತ್ತು ಗ್ರಾಮಸ್ಥರಿಂದ ವಿವರ ಪಡೆದರು. ಬೆತ್ತಲೆ ಮೆರವಣಿಗೆ ಪ್ರಕರಣದಿಂದ ನಮಗೆ ತುಂಬ ಬೇಸರವಾಗಿದೆ ಗ್ರಾಮದ ಕೆಲವರು ತಿಳಿಸಿದರು. ಸಂತ್ರಸ್ತ ಯುವಕನಿಗೆ 15 ವರ್ಷಗಳ ಹಿಂದೆ ಮಾನಸಿಕ ಕಾಯಿಲೆ ಇತ್ತು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನಿರಾಕರಿಸಿದರು. ಆತ ಪ್ರತಿಭಾವಂತ, ವಾಯುಮಾಲಿನ್ಯ ಇಲಾಖೆಯಲ್ಲಿನ ಕೆಲಸ ಬಿಟ್ಟು ಉನ್ನತ ಹುದ್ದೆಗೆ ಹೋಗುವ ಕನಸು ಕಾಣುತ್ತಿದ್ದ ಎಂದು ವಿವರ ನೀಡಿದರು. ತಂದೆ, ತಾಯಿ, ನಂತರದಲ್ಲಿ ಮಕ್ಕಳಿಗೂ ಸರಕಾರಿ ನೌಕರಿ ಸಿಕ್ಕಿದ ಕಾರಣ ಮತ್ತು ಮಗಳು ವೈದ್ಯೆಯಾಗಿರುವ ಕಾರಣಕ್ಕೆ ಗ್ರಾಮಕ್ಕೆ ಅಪರೂಪಕ್ಕೆ ಭೇಟಿ ಕೊಡುತ್ತಿದ್ದರು. ಆದರೆ ಗ್ರಾಮದ ಧಾರ್ಮಿಕ ಕಾರ್ಯಗಳಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಗ್ರಾಮಸ್ಥರು ಸ್ಮರಿಸಿದರು.
ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ಕುಮಾರ್ ಪ್ರಕರಣದ ತನಿಖೆ ನ್ಯಾಯಯುತವಾಗಿ ನಡೆಯುತ್ತಿದೆ. ಕೂಲಂಕುಷವಾಗಿ ಎಲ್ಲವನ್ನು ಪರಿಶೀಲಿಸಿಯೇ ಕ್ರಮ ತೆಗೆದುಕೊಳ್ಳುತ್ತೇವೆ. ಸಂತ್ರಸ್ತ ವ್ಯಕ್ತಿಯನ್ನು ವಶಕ್ಕೆ ಪಡೆಯುವ ಸಂದರ್ಭ ದುರ್ನಡತೆ ತೋರಿದ ಇಬ್ಬರೂ ಪೊಲೀಸರನ್ನು ಸಹ ಅಮಾನತು ಮಾಡಿದ್ದೇವೆ. ಅರ್ಚಕನನ್ನು ಬಂಧಿಸಲಾಗಿದೆ ಎಂದರು.
ಹೆಚ್ಚವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಅದ್ದಣ್ಣನವರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಕಾಶ್, ಡಿವೈಎಸ್ಪಿ ಸಿ.ಟಿ.ಜಯಕುಮಾರ್, ತಹಸೀಲ್ದಾರ್ ಎಂ.ನಂಜುಂಡಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್, ಸಿಪಿಐ ಎಚ್.ಎನ್.ಬಾಲಕೃಷ್ಣ ಹಾಜರಿದ್ದರು.