News Kannada
Thursday, December 08 2022

ಕರ್ನಾಟಕ

ವಿರಾಜಪೇಟೆ ತಾ.ಪಂ ಸಾಮಾನ್ಯ ಸಭೆ: ಅಧಿಕಾರಿಗಳ ವಿರುದ್ಧ ಸದಸ್ಯರ ಅಸಮಾಧಾನ

Photo Credit :

ವಿರಾಜಪೇಟೆ ತಾ.ಪಂ ಸಾಮಾನ್ಯ ಸಭೆ: ಅಧಿಕಾರಿಗಳ ವಿರುದ್ಧ ಸದಸ್ಯರ ಅಸಮಾಧಾನ

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ ಅನುದಾನದ ಮೊತ್ತ ಸರ್ಕಾರಕ್ಕೆ ವಾಪಸ್ ಹೋಗಿರುವುದಕ್ಕೆ ವೀರಾಜಪೇಟೆ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಸಾಮರ್ಥ್ಯ ಸೌಧದಲ್ಲಿ ವೀರಾಜಪೇಟೆ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ವೀರಾಜಪೇಟೆ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರುಗಳು ಅಧಿಕಾರಿಯ ನಿರ್ಲಕ್ಷ್ಯವನ್ನು ಖಂಡಿಸಿದರು.

ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದ್ದರೂ ವಿವಿಧ ಕಾಮಗಾರಿಗಳ ರೂ. 2.4 ಲಕ್ಷ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿರುವುದರಿಂದ ಮೊದಲು ಹಣ ಖರ್ಚು ಮಾಡಿದ ಗುತ್ತಿಗೆದಾರರ ಆರ್ಥಿಕ ಸ್ಥಿತಿಗೆ ತೊಡಕಾಗಿದೆ. ಅನುದಾನ ಕೂಡ ಇಲಾಖೆ ನಿರ್ಲಕ್ಷ್ಯದಿಂದ ವಾಪಸ್ ಹೋಗಿರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಉದಾಹಣೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಗುತ್ತಿಗೆದಾರರು ಕಾಮಗಾರಿ ಗುತ್ತಿಗೆ ಪಡೆಯಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಮಾಳೇಟೀರ ಪ್ರಶಾಂತ್ ಅವರು ಮಾತನಾಡಿ, ಒಂದಷ್ಟು ಜನರು ನಿವೇಶನ ರಹಿತರು ಎಂದು ಹೇಳಿಕೊಂಡು ಬೇರೆ ಬೇರೆ ಗ್ರಾಮಗಳಲ್ಲಿನ ಜಾಗಗಳಲ್ಲಿ ಸೇರಿಕೊಂಡಿದ್ದಾರೆ. ಇದರಂತೆ ಕೆದಮುಳ್ಳೂರು ವ್ಯಾಪ್ತಿಯಲ್ಲಿ ಕೂಡ ಹೊರಗಿನಿಂದ ಬಂದವರು ಸೇರಿಕೊಂಡಿದ್ದಾರೆ. ಮಳೆಗಾಲದಲ್ಲಿ ಇವರಿಗೆ ತೊಂದರೆಯಾದರೆ ಯಾರು ಹೊಣೆ. ಇವರನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರು ಸರ್ಕಾರಿ ಜಾಗ ಪಡೆದುಕೊಳ್ಳಬೇಕು. ನಿವೇಶನ ರಹಿತರಿಗೆ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿವೇಶನ ಕಲ್ಪಿಸಬೇಕು ಈ ಬಗ್ಗೆ ಸ್ಥಳೀಯ ಪಂಚಾಯ್ತಿ ಕ್ರಮಕೈಗೊಳ್ಳಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಜೂನ್ 11 ರಂದು ಆಯೋಜಿಸಿದ್ದ ಸಾಮಾನ್ಯ ಸಭೆ ತಹಶೀಲ್ದಾರ್ ಗೈರಾದ ಕಾರಣ ರದ್ದಾಗಿತ್ತು. ಆದರೂ ಇಂದಿನ ಸಭೆಗೂ ಗೈರಾಗಿರುವ ತಹಶೀಲ್ದಾರ್ ಗೋವಿಂದರಾಜು ಅವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ತಹಶೀಲ್ದಾರ್ ಸಭೆಗೆ ಬಾರದೆ ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು. ಒಟ್ಟಾಗಿ ನಿಯೋಗ ತೆರಳಿ ಕ್ರಮಕ್ಕೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲು ಸದಸ್ಯರು ಒಮ್ಮತದ ನಿರ್ಧಾರ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಸದಸ್ಯರು ಪ್ರಕಟಿಸಿದರು.

ತಹಶೀಲ್ದಾರ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಆದರೂ ಗೈರು ಹಾಜರಾಗಿದ್ದಾರೆ ಎಂದು ಇಒ ಜಯಣ್ಣ ಮಾಹಿತಿ ನೀಡಿದರು.
ಇಲಾಖೆಗಳ ಮೂಲಕ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಸಬ್ಸಿಡಿ ಮೂಲಕ ಉಚಿತವಾಗಿ ನೀಡುವ ವಸ್ತುಗಳು ಉಪಯೋಗಕ್ಕೆ ಬಾರದೆ ಫಲಾನುಭವಿಗಳ ಕರೆಯಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಅಜಿತ್ ಕರುಂಬಯ್ಯ ದೂರಿದರು.
ಸಾಮಾಜಿಕ ಅರಣ್ಯ ಇಲಾಖೆ ಮೂಲಕ ವಿತರಣೆ ಮಾಡಿರುವ ಸೋಲಾರ್ ಲ್ಯಾಂಪ್ ಉರಿಯದೇ ಇರುವುದರಿಂದ ಫಲಾನುಭವಿಗಳು ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಮತ್ತೆ ಕುಕ್ಕರ್ ವಿತರಣೆ ಮಾಡುವ ಮೂಲಕ ನಮಗೆ ತೊಂದರೆ ನೀಡಬೇಡಿ. ಸಬ್ಸಿಡಿ ಮೂಲಕ ನೀಡುವ ವಸ್ತುಗಳನ್ನು ಕಂಪೆನಿಗಳು ಬೇರೆ ಜಾಗದಲ್ಲಿ ಪ್ರತ್ಯೇಕವಾಗಿ ತಯಾರಿ ಮಾಡುತ್ತಿವೆ. ಇದರಿಂದ ಕಳಪೆ ವಸ್ತು ಫಲಾನುಭವಿಗಳ ಕೈಸೇರುವಂತಾಗಿದೆ ಎಂದು ಅವರು ಆರೋಪಿಸಿದರು.

See also  ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು

ಜಾತಿ ಪ್ರಮಾಣಪತ್ರ ಪಡೆಯಲು ವಿಳಂಬವಾಗುತ್ತಿರುವುದರಿಂದ ತಾಲೂಕಿನಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರಿ ಸವಲತ್ತು ನೀಡುವ ಶಾಲೆ ಸೇರಲು ಆಗುತ್ತಿಲ್ಲ. ಅನಾವಶ್ಯಕ ಮನೆಯಲ್ಲಿಯೇ ದಿನ ಕಳೆಯುವಂತಾಗಿದೆ ಎಂದು ಸದಸ್ಯರಾದ ಪಲ್ವಿನ್ ಪೂಣಚ್ಚ ಹಾಗೂ ಪ್ರಕಾಶ್ ಗಮನ ಸೆಳೆದರು.
ತಾಲೂಕಿನಲ್ಲಿ ಸುಮಾರು 36 ಮುಖ್ಯರಸ್ತೆ ಕಾಮಗಾರಿಗಳಿಗೆ ಹಣ ಬಿಡುಗಡೆಯಾದ ಕೂಡಲೇ ಕಾಮಗಾರಿ ನಡೆಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಪಾಲಿಬೆಟ್ಟ-ಮೇಕೂರು ರಸ್ತೆ ಕಾಮಗಾರಿ ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಮೇಕೂರು ರಸ್ತೆ ತೀರಾ ಹದಗೆಟ್ಟಿರುವುದರಿಂದ ತೊಂದರೆಯಾಗಿದೆ ಎಂದು ಸದಸ್ಯ ಅಜಿತ್ ಕರುಂಬಯ್ಯ ಗಮನಸೆಳೆದರು.

ಆಯಾ ಇಲಾಖೆವಾರು ನಡೆಯುವ ಕಾಮಗಾರಿಗಳ ಗುತ್ತಿಗೆದಾರರನ್ನು ತಾಲೂಕು ಪಂಚಾಯ್ತಿ ಅಧಿಕಾರಿಗಳು ಕಚೇರಿಗೆ ಕರೆಸಿಕೊಳ್ಳುತ್ತಿರುವುದರಿಂದ ಗುತ್ತಿಗೆದಾರರಿಗೆ ತೊಂದರೆಯಾಗುತ್ತಿದೆ ಎಂದು ನೆಲ್ಲಿರ ಚಲನ್ ಅಧಿಕಾರಿಗಳಿಗೆ ಹೇಳಿದರು. ಆಯಾ ಇಲಾಖೆ ಮೂಲಕ ಅವರು ವ್ಯವಹರಿಸಿಕೊಳ್ಳಲಿ.ತಾಲೂಕು ಕಚೇರಿ ಸಿಬ್ಬಂದಿ ಮಧ್ಯಪ್ರವೇಶ ಮಾಡುವುದರಿಂದ ಗುತ್ತಿಗೆದಾರರಿಗೆ ಆರ್ಥಿಕವಾಗಿ ತೊಂದರೆಯಾಗುತ್ತಿರುವುದು ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಲಿದೆ ಎಂದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಜೆನ್ನಿಸ್, ಇಒ ಜಯಣ್ಣ ಪಾಲ್ಗೊಂಡಿದ್ದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು