ಮಂಡ್ಯ: ಬ್ಯಾಂಕಿನಿಂದ ಪಡೆದ ಕೃಷಿ ಸಾಲ ತೀರಿಸದ ಕಾರಣ ರೈತನಿಗೆ ನೋಟಿಸ್ ಜಾರಿಗೊಳಿಸಿದ್ದು, ಇದರಿಂದ ಆತಂಕಗೊಂಡ ರೈತ ಮುಖ್ಯಮಂತ್ರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾನೆ.
ತಾಲೂಕಿನ ಉಪ್ಪರಕನಹಳ್ಳಿ ಗ್ರಾಮದ ಯು.ಬಿ. ಮೂಡೇಗೌಡ ಎಂಬಾತನೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸಾಲಬಾದೆಯಿಂದ ತನ್ನನ್ನು ಪಾರು ಮಾಡುವಂತೆ ಮನವಿ ಮಾಡಿದ್ದಾನೆ.
ನನ್ನ ತಂದೆ ಬಸವೇಗೌಡ ಎಸ್.ಬಿ.ಐ. ಬ್ಯಾಂಕಿನಿಂದ ಸಾಲ ಪಡೆದಿದ್ದರು. ಸರಿಯಾದ ಬೆಳೆ ಬಾರದೆ ಸಾಲ ಮರುಪಾವತಿ ಸಾಧ್ಯವಾಗಲಿಲ್ಲ. ನನ್ನ ತಂದೆಯ ಆರೋಗ್ಯ ಕ್ಷೀಣಿಸಿದ್ದು, ಹಾಸಿಗೆ ಹಿಡಿದ್ದಾರೆ. ಇಂತಹ ಸಮಯದಲ್ಲಿ ಎಸ್.ಬಿ.ಐ. ಬ್ಯಾಂಕಿನವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ನ್ಯಾಯಾಲಯ ಜೂ. 25ರಂದು ಕೋರ್ಟ್‍ಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.
ಹಾಸಿಗೆ ಹಿಡಿದಿರುವ ನನ್ನ ತಂದೆ ನ್ಯಾಯಾಲಯಕ್ಕೂ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ನನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ನನ್ನನ್ನು ಬದುಕಿಸುತ್ತೀರೋ ಅಥವಾ ಸಾವಿನ ದವಡೆಗೆ ನೂಕುತ್ತೀರೋ ನಿರ್ಧರಿಸಿ. ನ್ಯಾಯಾಲಯ ನನಗೆ ಮೂರು ದಿನಗಳ ಕಾಲಾವಕಾಶ ನೀಡಿದೆ. ಅಷ್ಟರಲ್ಲಿ ಸಮಸ್ಯೆ ಬಗೆಹರಿಸುವ ಬ್ರಹ್ಮನಾಗಿ ಬರುತ್ತೀರೋ ಅಥವಾ ಯಮನಾಗಿ ಬಂದು ನನ್ನ ಆತ್ಮಹತ್ಯೆಗೆ ಕಾರಣರಾಗುತ್ತೀರೋ ಎಂದು ಮನವಿ ಮಾಡಿದ್ದಾನೆ.