ಕಾರವಾರ: ಜಿಂಕೆಯನ್ನು ಬೇಟೆಯಾಡಿ ಮನೆಯಲ್ಲಿ ಕಡಿಯುತ್ತಿರುವಾಗ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿ, ಜಿಂಕೆ ಮಾಂಸ ಹಾಗೂ ಎರಡು ಬೈಕ್ ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಯಲ್ಲಾಪುರದಲ್ಲಿ ನಡೆದಿದೆ .
ಯಲ್ಲಾಪುರದ ಮಹಮ್ಮದ್ ಹನೀಫ್ ಶೇಖ್ , ಮೌಸಿಮ್ ಅಬ್ದುಲ್ ರಜಾಕ್ ಶೇಖ್, ತಾಲೂಕಿನ ಮಂಚಿಕೇರಿಯ ಇಸ್ಮಾಯಿಲ್ ಶೇಖ್ , ಅಬ್ದುಲ್ ಖಾದರ್ ಶೇಖ್ , ಬೊಮ್ಮನಹಳ್ಳಿಯ ಮಹಮ್ಮದ್ ಹುಸೇನ್ಶೇಖ್ ಬಂಧಿತ ಆರೋಪಿಗಳು. ಬಂಧಿತರಿಂದ ಜಿಂಕೆ ಮಾಂಸ ಹಾಗೂ ಬೇಟೆಗೆ ಬಳಸಿದ ದ್ವಿಚಕ್ರ ವಾಹನ ಮತ್ತಿತ್ತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಯಲ್ಲಾಪುರದ ಬೇಡ್ತಿ ಹಳ್ಳದಲ್ಲಿ ಮೀನು ಹಿಡಿಯಲು ಹೋದಾಗ ಅಲ್ಲಿಗೆ ಬಂದಿದ್ದ ಜಿಂಕೆಯನ್ನು ಬೇಟೆಯಾಡಿ ಮಂಚಿಕೇರಿಯಲ್ಲಿ ಮಾಂಸವನ್ನು ಹಂಚಿಕೆ ಮಾಡಿಕೊಳ್ಳುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅರಣ್ಯ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.