ಕಾಸರಗೋಡು: ಜಿಲ್ಲೆಯಲ್ಲಿ ಅಕ್ರಮ ಪಡಿತರ ಚೀಟಿ ಹೊಂದಿರುವವರನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಆಹಾರ ಮತ್ತು ನಾಗರಿಕ ಪೂರೈಕೆ ಪೂರೈಕೆ ಇಲಾಖೆ ಮುಂದಾಗಿದೆ.
ಜಿಲ್ಲೆಯಲ್ಲಿ ಹಲವಾರು ಅನರ್ಹರು ಮಂದಿ ಆದ್ಯತಾ ಮತ್ತು ಎಎವೈ ಪಡಿತರ ಚೀಟಿಯನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಈಗಾಗಲೇ 318 ಪಡಿತರ ಚೀಟಿ ಪತ್ತೆ ಹಚ್ಚಲಾಗಿದೆ.
ಮೇ 6ರಂದು ಆರಂಭಿಸಿದ್ದ ಪರಿಶೀಲನೆಯಲ್ಲಿ ಈವರೆಗೆ ಜಿಲ್ಲೆಯಲ್ಲಿ ಅನರ್ಹರಾದ 318 ಕಾರ್ಡ್ ದಾರರ ಪತ್ತೆಯಾಗಿತ್ತು. ಈವರೆಗೆ ಅವರು ಈ ಕಾರ್ಡ್ ಬಳಸಿ ಪಡೆದ ಪಡಿತರ ಸಾಮಾಗ್ರಿಗಳ ಮೌಲ್ಯ ರೂಪದಲ್ಲಿ ಕಿಲೋಗೆ 29.81 ರೂ.ನಂತೆ ದಂಡ ಪಡೆಯುವ ಕ್ರಮ ಆರಂಭಿಸಲಾಗಿದೆ ಎಂದವರು ನುಡಿದರು.
ಅನರ್ಹರಾದ ಅನೇಕ ಮಂದಿ ಆದ್ಯತಾ ಪಟ್ಟಿ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರೂ, ಜಿಲ್ಲೆಗೆ ಮಂಜೂರು ಮಾಡಿರುವ ಆದ್ಯತೆ ಕಾರ್ಡ್ ಗಳ ಸಂಖ್ಯೆಯ ಮಿತಿ ತಲಪಿರುವ ಹಿನ್ನೆಲೆಯಲ್ಲಿ ಆದ್ಯತೆ ಕಾರ್ಡ್ ಗಳನ್ನು ನೀಡಲು ಸಾಧ್ಯವಾಗದು. ಅನರ್ಹರು ಸ್ವಇಚ್ಛೆ ಯಿಂದ ಆದ್ಯತಾ ರಹಿತ ಕಾರ್ಡ್ ದಾರರ ಪಟ್ಟಿಗೆ ಅರ್ಜಿ ಸಲ್ಲಿಸಿದರೆ, ಅರ್ಹರಿಗೆ ಆದ್ಯತೆ ಕಾರ್ಡ್ ನೀಡಿಕೆ ಸಾಧ್ಯ.
ಈಗಾಗಲೇ ಅನರ್ಹರು ಇರಿಸಿಕೊಂಡಿರುವ ಆದ್ಯತಾ ಕಾರ್ಡ್ ಗಳನ್ನು ನಾಗರೀಕ ಪೂರೈಕೆ ಅಧಿಕಾರಿಗೆ ಸಲ್ಲಿಸಿದಲ್ಲಿ ಶಿಕ್ಷ ಕ್ರಮಗಳಿಂದ ಮುಕ್ತಿ ಪಡೆಯಬಹುದು. ಆದರೆ ಅನೇಕ ಮಂದಿಗೆ ಸೂಚನೆ ನೀಡಿಯೂ ಕಾರ್ಡ್ ಹಿಂದಿರುಗಿಸಿಲ್ಲ. ಈ ನಿಟಿನಲ್ಲಿ ಜಿಲ್ಲಾ, ತಾಲೂಕು ಮಟ್ಟದ ನಾಗರೀಕ ಪೂರೈಕೆ ಅಧಿಕಾರಿಗಳ ನೇತೃತ್ವದಲ್ಲಿ ಪಡಿತರ ಇನ್ಸ್ ಪೆಕ್ಟರರು ಸೇರಿರುವ ತಂಡ ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸುತ್ತಿದೆ. ಈ ರೀತಿ ಪತ್ತೆಯಾಗುವ ಆರೋಪಿಗಳಿಗೆ ದಂಡ ಹೇರಲಾಗುವುದು.
ನಾಗರೀಕ ಪೂರೈಕೆ ನಿರ್ದೇಶಕರಿಂದ ಲಭಿಸಿದ ಮೂರು ತಿಂಗಳಿಗಿಂತ ಅಧಿಕ ಪಡಿತರ ಸಾಮಾಗ್ರಿ ಖರೀದಿಸದೇ ಇರುವ ಆದ್ಯತೆ ಕಾರ್ಡ್ ದಾರರು, 65 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿ ಮಾತ್ರ ಇರುವ ಕಾರ್ಡ್ ಗಳು, ಒಬ್ಬರು ಮಾತ್ರ ಇರುವ ಕಾರ್ಡ್ ಗಳು ಇತ್ಯಾದಿಗಳ ಪರಿಶೀಲನೆ ನಡೆಯುತ್ತಿದೆ. ಪಟ್ಟಿ ಪ್ರಕಾರ ಅನರ್ಹರಾದ 371 ಕಾರ್ಡ್ ಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ಅನಿವಾಸಿ ಭಾರತೀಯ ಎಂಬ ವಿಚಾರವನ್ನು ಬಚ್ಚಿಟ್ಟು, ಮೃತರಾದವರ ಹೆಸರು ಹಾಗೇ ಇರಿಸಿ, ಆದ್ಯತಾ ಪಟ್ಟಿಯಲ್ಲಿದ್ದು, ಈಗ ವಿಳಾಸ ಬದಲಿಸಿರುವ ಮಂದಿಯ ಹೆಸರಲ್ಲಿ ಪಡಿತರ ಸಾಮಗ್ರಿಗಳನ್ನು ಪಡೆಯುತ್ತಿರುವ ವಿಚಾರ ಇಲಾಖೆಯ ಗಮನಕ್ಕೆ ಬಂದಿದೆ. ಇವರು ಅಕ್ಷಯ ಕೇಂದ್ರ ಮೂಲಕ ಅರ್ಜಿ ಸಲ್ಲಿಸಬೇಕು. ಪರಿಶೀಲನೆಯಲ್ಲಿ ಲೋಪ ಪತ್ತೆಯಾದರೆ ಕ್ರಮ ಕೈಗೊಳ್ಳಲಾಗುವುದು.
ಪಡಿತರ ಚೀಟಿಗಳಲ್ಲಿ ಆದಾರ್ ನಂಬ್ರ ಅಳವಡಿಸದೇ ಇರುವವರು ಅಕ್ಷಯ ಕೇಂದ್ರಗಳ ಮೂಲಕ, ನಾಗರೀಕ ಪೂರೈಕೆ ಕೇಂದ್ರಗಳ ಮೂಲಕ ಸೇರ್ಪಡೆ ಸಾಧ್ಯ. ಎರಡು ಪಡಿತರ ಚೀಟಿಗಳಲ್ಲಿ ಹೆಸರು ಹೊಂದಿರುವ ವ್ಯಕ್ತಿಗಳು ತುರ್ತಾಗಿ ಒಂದರಲ್ಲಿ ಹೆಸರು ತೆರವುಗೊಳಿಸಬೇಕು. ಈ ಸಂಬಂಧ ದೂರುಗಳಿದ್ದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ತಿಳಿಸಬೇಕು.
ನಾಗರೀಕ ಪೂರೈಕೆ ಕಚೇರಿಗಳು, ಕಾಸರಗೋಡು: 9188527412., ಮಂಜೇಶ್ವರ: 9188527415., ಹೊಸದುರ್ಗ: 9188527413., ವೆಳ್ಳರಿಕುಂಡ್: 9188527414.
ಆದ್ಯತೆ/ ಎ.ಎ.ವೈ.ಕಾರ್ಡ್ ಗೆ ಅನರ್ಹರಾದವರು ಈ ಕೆಳಗಿನವರು:
ಸರಕಾರಿ/ಅರೆ ಸರಕಾರಿ ಸಿಬ್ಬಂದಿ, ಸಾರ್ವಜನಿಕ ಸಂಸ್ಥೆಗಳ ಸಿಬ್ಬಂದಿ, ಸಹಕಾರಿ ಸಂಸ್ಥೆಗಳ ಸಿಬ್ಬಂದಿ, ಸೇವಾ ಪಿಂಚಣಿದಾರರು, ಆದಾಯ ತೆರಿಗೆದಾರರು, ಪ್ರತೀ ತಿಂಗಳ ಆದಾಯ 25 ಸಾವಿರಕ್ಕಿಂತ ಅಧಿಕವಾಗಿರುವವರು, ವಿದೇಶಗಳಲ್ಲಿ ದುಡಿಯುತ್ತಿರುವವರು, ಸ್ವಂತವಾಗಿ ಒಂದು ಎಕ್ರೆಗಿಂತ ಅಧಿಕ ಜಾಗ ಹೊಂದಿರುವವರು(ಪರಿಶಿಷ್ಟ ಪಂಗಡದವರ ಹೊರತಾಗಿ), ಸ್ವಂತವಾಗಿ ಒಂದು ಸಾವಿರ ಚ.ಅಡಿ ವಿಸ್ತೀರ್ಣದ ಮನೆ, ಫ್ಲಾಟ್ ಹೊಂದಿರುವವರು, ನಾಲ್ಕು ಚಕ್ರ ವಾಹನಹೊಂದಿರುವವರು(ಬದುಕಿಗಾಗಿ ಟ್ಯಾಕ್ಸಿ ಚಲಾಯಿಸುವವರ ಹೊರತಾಗಿ), ಕುಟುಂಬದ ಸದಸ್ಯರಲ್ಲಿ ಯಾರಾದರೂ ಒಬ್ಬರ ಆದಾಯ ತಿಂಗಳಿಗೆ 25 ಸಾವಿರ ರೂ.ಗಿಂತ ಅಧಿಕ ಉಳ್ಳವರು.