ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಗೋಣಿಕೊಪ್ಪದಲ್ಲಿ ದುಂಡು ಮೇಜಿನ ಸಂವಾದ ನಡೆಯಿತು.
ಕಿತ್ತಳೆ ಬೆಳಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬೆಳೆಗಾರರ ಸಮಸ್ಯೆಗಳು, ಮಳೆಹಾನಿ ಕೊಡಗಿನ ಪುನರ್ ನಿರ್ಮಾಣ, ಆನೆ ಮತ್ತು ಮಾನವ ಸಂಘರ್ಷ ತಪ್ಪಿಸಲು ಕ್ರಮ, ಕರಿಮೆಣಸು ಆಮದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮಲೆನಾಡು ಭಾಗದ ಕಾಫಿ ಹಾಗೂ ಕಾಳು ಮೆಣಸು ಬೆಳೆಗಾರರ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ವಿವಿಧ ಸಭೆಗಳು ಹಾಗೂ ಹೋರಾಟದ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಯಚೂರಿನ ಹಿರಿಯ ಗೌರವ ಅಧ್ಯಕ್ಷ ಚಾಮರಸ ಪಾಟೀಲ್, ಕೃಷಿಸಾಲ ಸೇರಿದಂತೆ ರೈತರು ಪಡೆಯುವ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬೇಕು ಮತ್ತು ಸಾಲ ಮರುಪಾವತಿಸಲು ಹತ್ತು ವರ್ಷಗಳ ಕಾಲಾವಕಾಶ ನೀಡಬೇಕೆಂದರು.
ಸಂಯೋಜಕ ಕೆ.ಕೆ.ವಿಶ್ವನಾಥ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ರೈತರು ಹಾಗೂ ಬೆಳೆಗಾರರು ಅರಣ್ಯವನ್ನು ಅತಿಕ್ರಮಣ ಮಾಡಿಕೊಂಡು ಪ್ರಾಣಿಗಳನ್ನು ಓಡಿಸುತ್ತಿದ್ದಾರೆ ಎಂಬ ಸುಳ್ಳು ಮಾಹಿತಿ ಕೇಂದ್ರ ಸರಕಾರದ ಬಳಿ ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲವೆಂದು ಆರೋಪಿಸಿದರು.
ಇಲ್ಲಿನ ನೈಜ್ಯ ಪರಿಸ್ಥಿತಿಯ ಬಗ್ಗೆ ವೈಜ್ಞಾನಿಕವಾಗಿ ಅಧಿಕೃತ ಮಾಹಿತಿಯನ್ನು ಲಿಖಿತ ರೂಪದಲ್ಲಿ ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದರು. ವಿಯೆಟ್ನಾಂ ದೇಶಕ್ಕೆ ಕರಿಮೆಣಸನ್ನು ಬೆಳೆಸುವ ರೀತಿಯನ್ನು ತೋರಿಸಿಕೊಟ್ಟ ಭಾರತ ಇಂದು ಅವರಿಂದಲೇ ತೊಂದರೆಯನ್ನು ಅನುಭವಿಸುತ್ತಿದೆ. ದೊಡ್ಡ ಪ್ರಮಾಣದಲ್ಲಿ ಕಳ್ಳ ಸಾಗಾಣಿಕೆ ಮೂಲಕ ದೇಶವನ್ನು ಪ್ರವೇಶಿಸುತ್ತಿರುವ ಕರಿಮೆಣಸಿನಿಂದಾಗಿ ಸ್ಥಳೀಯ ಬೆಳೆಗೆ ಸೂಕ್ತ ಸಿಗುತ್ತಿಲ್ಲ. ಇದು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಎಂದು ಅಭಿಪ್ರಾಯಪಟ್ಟರು.
ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಕಾವೇರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹೋರಾಟ ನಡೆಸಲು ಮುಂದೆ ಬರುವವರ ಸಂಖ್ಯೆ ಕಡಿಮೆ ಇದೆ ಮತ್ತು ನಮ್ಮೊಳಗಿನ ಒಗ್ಗಟ್ಟಿನ ಕೊರತೆಯೇ ವೈಫಲ್ಯಗಳಿಗೆ ಕಾರಣವಾಗಿದೆ ಎಂದರು. ಸರಕಾರಗಳು ಯೋಜನೆಯನ್ನು ರೂಪಿಸುತ್ತವೆ, ಆದರೆ ಕಠಿಣವಾದ ನಿಯಮಗಳನ್ನು ಜಾರಿ ಮಾಡುವುದರಿಂದ ಸೌಲಭ್ಯಗಳು ರೈತರ ಹಾಗೂ ಬೆಳೆಗಾರರ ಪಾಲಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.