ಮಡಿಕೇರಿ: ನಗರಸಭೆಯ ವಾರ್ಡ್ಸಂಖ್ಯೆ 20 ರಲ್ಲಿರುವ ಕನ್ನಂಡಬಾಣೆ ಬಡಾವಣೆಯಲ್ಲಿ ಸಾವಿರಾರು ಜನರಿಗೆ ಕುಡಿಯುವ ನೀರನ್ನು ಪೂರೈಸುವ ಬಾವಿಯೊಂದಿದ್ದು, ಇದರ ಪಕ್ಕದಲ್ಲೇ ನಗರಸಭೆ ಶೌಚಾಲಯವನ್ನು ನಿರ್ಮಿಸಿದೆ. ಇದು ಮುಂಬರುವ ದಿನಗಳಲ್ಲಿ ಕಲುಷಿತ ನೀರು ಪೂರೈಕೆಗೆ ದಾರಿ ಮಾಡಿಕೊಡಲಿದೆ ಎಂದು ನಗರಸಭಾ ಮಾಜಿ ಸದಸ್ಯ ಕೆ.ಜಿ.ಪೀಟರ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಅವರು ಯಾವುದೇ ಕಾರಣಕ್ಕು ಶೌಚಾಲಯದ ಉಪಯೋಗಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿದ್ದಾರೆ.
ಕುಡಿಯುವ ನೀರು ಸರಬರಾಜು ಮಾಡುವ ನಗರಸಭಾ ಸಿಬ್ಬಂದಿಗಳಿಗಾಗಿ ಇಲ್ಲಿ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ಅವೈಜ್ಞಾನಿಕ ಕ್ರಮದಲ್ಲಿ ನಿರ್ಮಾಣಗೊಂಡಿದೆ. ಬಾವಿ ಮತ್ತು ಶೌಚಾಲಯಕ್ಕೆ ಕೇವಲ ನಾಲ್ಕು ಅಡಿಯಷ್ಟು ಅಂತರವಿದ್ದು, ಶೌಚಾಲಯದ ಕಲುಷಿತ ನೀರು ಬಾವಿಯನ್ನು ಸೇರುವ ಎಲ್ಲಾ ಸಾಧ್ಯತೆಗಳಿದೆ. ಈ ಬಾವಿಯ ಮೂಲಕ ಕನ್ನಂಡಬಾಣೆ, ದೇಚೂರು, ಪುಟಾಣಿನಗರ, ರಾಘವೇಂದ್ರ ದೇವಾಲಯ ವ್ಯಾಪ್ತಿ, ಜಿಲ್ಲಾಸ್ಪತ್ರೆ ಸೇರಿದಂತೆ ನಗರ ವಿವಿಧ ಬಡಾವಣೆಗಳಿಗೆ ನೀರು ಸರಬರಾಗುತ್ತಿದೆ. ಕುಡಿಯುವ ನೀರನ್ನು ಪೂರೈಸಲು ಕನ್ನಂಡಬಾಣೆಯಲ್ಲಿ ಇದು ಒಂದೇ ಬಾವಿಯಿದ್ದು, ಇದನ್ನು ಸಂರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಪೀಟರ್ ಮನವಿಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ವಿರೋಧದ ನಡುವೆಯೂ ಶೌಚಾಲಯವನ್ನು ನಿರ್ಮಿಸಲಾಗಿದೆ, ನಗರಸಭಾ ಸದಸ್ಯನಾಗಿದ್ದಾಗ ನಾನು ಶೌಚಾಲಯ ನಿರ್ಮಿಸುವುದನ್ನು ವಿರೋಧಿಸಿ ವ್ಯಕ್ತಪಡಿಸಿರುವ ಅಭಿಪ್ರಾಯ ನಿರ್ಣಯದಲ್ಲಿ ಅಡಕವಾಗಿದೆ. ಆದರೆ ಇದಕ್ಕೆ ಬೆಲೆಯೇ ನೀಡದ ನಗರಸಭೆ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಶೌಚಾಲಯವನ್ನು ನಿರ್ಮಿಸಿದೆ ಎಂದು ಆರೋಪಿಸಿದ್ದಾರೆ.
ನಾಗರೀಕರ ಆರೋಗ್ಯದ ಹಿತದೃಷ್ಟಿಯಿಂದ ಈ ಶೌಚಾಲಯವನ್ನು ಉಪಯೋಗಿಸಲು ಅವಕಾಶ ನೀಡದೆ ಕಟ್ಟಡವನ್ನು ಬೇರೆ ವ್ಯವಸ್ಥೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಎಲ್ಲರ ವಿರೋಧದ ನಡುವೆಯು ಶೌಚಾಲಯವನ್ನು ಉಪಯೋಗಕ್ಕೆ ನೀಡಿದರೆ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪೀಟರ್ ಎಚ್ಚರಿಕೆ ನೀಡಿದ್ದಾರೆ.
ಕನ್ನಂಡಬಾಣೆ ಬಾವಿಯಿಂದ ಪ್ರಸ್ತುತ ಸರಬರಾಜಾಗುತ್ತಿರುವ ಕುಡಿಯುವ ನೀರು ಕೆಸರುಮಯವಾಗಿದ್ದು, ಕಲುಷಿತ ನೀರು ಸರಬರಾಜಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ಈ ಭಾಗದ ಜನರಿಗೆ ಶುದ್ಧ ನೀರನ್ನೇ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.