ಮದ್ದೂರು: ಚಿರತೆಯ ಕಳೆಬರ ತಾಲೂಕಿನ ಕಿರಂಗೂರು ಗ್ರಾಮದಲ್ಲಿ ಪತ್ತೆಯಾಗಿದೆ. ಈ ಚಿರತೆ ಹೇಗೆ ಸಾವನ್ನಪ್ಪಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲವಾದರೂ ಕಾದಾಟದಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ಕಿರಂಗೂರು ಗ್ರಾಮದ ನಿವಾಸಿ ಶಿವಣ್ಣ ಎಂಬುವರ ಕಬ್ಬಿನ ಗದ್ದೆಯಲ್ಲಿ ಚಿರತೆ ಸಾವನ್ನಪ್ಪಿದೆ. ಎಂದಿನಂತೆ ಕಬ್ಬಿನ ಗದ್ದೆಗೆ ತೆರಳಿದ ವೇಳೆ ಚಿರತೆಯ ಕಳೆಬರ ಪತ್ತೆಯಾಗಿದೆ. ಇದು ಸುಮಾರು 2 ವರ್ಷದ ಹೆಣ್ಣು ಚಿರತೆಯಾಗಿದ್ದು, ಮೈಮೇಲೆ ಗಾಯಗಳಿರುವುದರಿಂದ ಬೇರೆ ಚಿರತೆಯೊಂದಿಗೆ ಕಾದಾಡಿ ಸಾವನ್ನಪ್ಪಿರ ಬಹುದೆಂದು ಹೇಳಲಾಗಿದೆ.
ಚಿರತೆಯ ಶವ ಪರೀಕ್ಷೆ ಮಾಡಲಾಗಿದ್ದು ದೇಹದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಚಿರತೆಯ ಸಾವಿಗೆ ಸ್ಪಷ್ಟತೆ ತಿಳಿದು ಬರಲಿದೆ. ಸ್ಥಳದಲ್ಲಿಯೇ ಚಿರತೆಯ ಅಂತ್ಯಕ್ರಿಯೆ ನಡೆಸಲಾಗಿದೆ.