News Kannada
Monday, December 05 2022

ಕರ್ನಾಟಕ

ಮಳೆಹಾನಿ ಕಾರಣ- ಪರಿಹಾರದ ಕುರಿತು ಪೊನ್ನಂಪೇಟೆ ಸಿಐಟಿ ವಿದ್ಯಾರ್ಥಿಗಳಿಂದ ಡಿಸಿಗೆ ವರದಿ

Photo Credit :

ಮಳೆಹಾನಿ ಕಾರಣ- ಪರಿಹಾರದ ಕುರಿತು ಪೊನ್ನಂಪೇಟೆ ಸಿಐಟಿ ವಿದ್ಯಾರ್ಥಿಗಳಿಂದ ಡಿಸಿಗೆ ವರದಿ

ಮಡಿಕೇರಿ: ಪೊನ್ನಂಪೇಟೆ ಹಳ್ಳಿಗಟ್ಟು ಗ್ರಾಮದ ಕೂರ್ಗ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಮಳೆಹಾನಿ, ಭೂಕುಸಿತ ಮತ್ತು ನಂತರದ ದಿನಗಳ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ಕಾಲೇಜ್‍ನ ಅಂತಿಮ ಪದವಿಯ ವಿದ್ಯಾರ್ಥಿಗಳಾದ ವಿ.ಪುನೀತ್ ವಿಶ್ವಾಸ್, ವಿ.ರವಿಕುಮಾರ್, ಟಿ.ಸ್ವರೂಪ್ ಹಾಗೂ ಎನ್.ಎ.ಹಾನಿಯಾ ಅವರುಗಳು ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿಯಾಗಿ ಅಧ್ಯಯನದ ವರದಿಯನ್ನು ಸಲ್ಲಿಸಿದರು.

ಪರಿಸರಕ್ಕೆ ಪೂರಕವಾದ ಪರಿಹಾರ ಕ್ರಮಗಳಿಂದ ಮುಂದೆ ಸಂಭವಿಸಬಹುದಾದ ಪ್ರಾಕೃತಿಕ ಅನಾಹುತಗಳನ್ನು ತಡೆಗಟ್ಟಬಹುದಾಗಿದೆ ಎಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ ವಿದ್ಯಾರ್ಥಿಗಳು ಅತಿವೃಷ್ಟಿಯ ದಿನದಿಂದ ನಿರಂತರವಾಗಿ ನಡೆಸಿದ ಅಧ್ಯಯನದ ಅನುಭವಗಳನ್ನು ಹಂಚಿಕೊಂಡರು.

ಜಿಲ್ಲೆಯ ಸುಮಾರು 105 ಪ್ರದೇಶಗಳಲ್ಲಿ ಮಳೆಹಾನಿಯಾಗಿದ್ದು, ಇವುಗಳಲ್ಲಿ 80 ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ಸಂಪಾಜೆ ಮತ್ತು ಸೋಮವಾರಪೇಟೆ ರಸ್ತೆಯ ಪ್ರದೇಶಗಳು ಹೆಚ್ಚು ಹಾನಿಯಾಗಿದ್ದು, ಕಠಿಣ ಪರಿಸ್ಥಿತಿಯನ್ನು ಎದುರಿಸಿವೆ. ಆಗಸ್ಟ್ ತಿಂಗಳಿನಲ್ಲಿ ಅತಿವೃಷ್ಟಿ ಸಂಭವಿಸಿದ್ದು, ಅದಾದ ಒಂದೇ ವಾರದಲ್ಲಿ ನಾವು ಅಧ್ಯಯನವನ್ನು ಆರಂಭಿಸಿದೆವು. ನಮ್ಮ ಪ್ರಯತ್ನಕ್ಕೆ ಕಾಲೇಜು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ, ಜಿಲ್ಲಾಡಳಿತ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸೇರಿದಂತೆ ಕೆಲವು ಪರಿಸರ ತಜ್ಞರೂ ಸಹಕಾರ ನೀಡಿದ್ದಾರೆ.

ಅತಿವೃಷ್ಟಿಯಿಂದಾಗಿ ಭೂಕುಸಿತ ಉಂಟಾಗಿ ಹೆಚ್ಚು ಅನಾಹುತವಾದ ಕಾರಣ ಮಣ್ಣಿನ ಪರೀಕ್ಷೆಗೆ ಆದ್ಯತೆ ನೀಡಲಾಯಿತು. ಹೆಚ್ಚು ಹಾನಿಯಾದ ಪ್ರದೇಶದಲ್ಲಿ ಇದೇ ರೀತಿಯ ಪರಿಸ್ಥಿತಿ ಈ ಹಿಂದೆ ಸಂಭವಿತ್ತೇ ಎಂದು ಇತಿಹಾಸದ ಪುಟಗಳಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಯಿತು. ಇದಕ್ಕಾಗಿ ಜಿಲ್ಲೆಯ ಬರಹಗಾರ ಭಾರಧ್ವಜ್ ಅವರ ಪುಸ್ತಕವನ್ನೂ ಅಧ್ಯಯನ ನಡೆಸಲಾಯಿತು. ಮಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ ಗ್ರಾಮಸ್ಥರ ಅಭಿಪ್ರಾಯವನ್ನೂ ಸಂಗ್ರಹಿಸಲಾಯಿತು. ಅತಿ ಮಳೆಯಿಂದ ಗದ್ದೆ ಮತ್ತು ತೋಟಗಳಿಗೆ ಆದ ಹಾನಿಯ ಬಗ್ಗೆ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ ಹಿನ್ನೆಲೆ ಕೆಸರು ಮತ್ತು ಮರಳಿನಿಂದ ತುಂಬಿ ಹೋಗಿರುವ ಭೂಮಿಯಲ್ಲಿ ಮತ್ತೆ ಕೃಷಿ ಕಾರ್ಯ ನಡೆಸಬಹುದೇ ಎಂದು ವೈಜ್ಞಾನಿಕವಾಗಿ ಅಧ್ಯಯನ ನಡೆಸಲಾಗಿದೆ.

ಕಡಿದಾದ ಮತ್ತು ಇಳಿಜಾರು ಪ್ರದೇಶಗಳು ಅತಿವೃಷ್ಟಿಯಿಂದ ಸ್ಥಾನಪಲ್ಲಟವಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕಾಂಕ್ರಿಟ್ ತಡೆಗೋಡೆಗಳ ಬದಲಿಗೆ ಪ್ರಕೃತಿಗೆ ಪೂರಕವಾಗಿ ಇಂತಹ ಪದೇಶದಲ್ಲಿ ಹುಲ್ಲುಗಳನ್ನು ಬೆಳೆಸುವುದರ ಬಗ್ಗೆ ವರದಿಯಲ್ಲಿ ಸಲಹೆಗಳನ್ನು ನೀಡಲಾಗಿದೆ.

ಜಿಲ್ಲೆಯ ಭೂಪ್ರದೇಶ ಹವಾಗುಣದ ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಬೇಕಾದರೆ ಅದಕ್ಕೆ ಬೆಂಬಲವಾಗಿ ಸಸ್ಯರಾಶಿಗಳೂ ಇರಬೇಕು. ಆಯಾ ಪ್ರದೇಶಕ್ಕೆ ಹೊಂದಿಕೆಯಾಗುವ ಹುಲ್ಲು ಮತ್ತು ಸಸ್ಯಾಭಿವೃದ್ಧಿಯಿಂದ ಭೂಕುಸಿತದಂತಹ ಅನಾಹುತಗಳನ್ನು ತಡೆಗಟ್ಟಬಹುದಾಗಿದೆ ಎಂದು ಮಾಹಿತಿ ನೀಡಿದ ವಿದ್ಯಾರ್ಥಿಗಳಾದ ವಿ.ಪುನೀತ್‍ವಿಶ್ವಾಸ್, ವಿ.ರವಿಕುಮಾರ್, ಟಿ.ಸ್ವರೂಪ್ ಹಾಗೂ ಎನ್.ಎ.ಹಾನಿಯಾ ವರದಿಯಲ್ಲಿ ಸುಮಾರು 17 ಸಲಹೆಗಳನ್ನು ನಮೂದಿಸಲಾಗಿದೆ ಎಂದರು.

See also  ಜಮೀನಿಗೆ ಬಾರ್ ಸ್ಥಳಾಂತರ ವಿರುದ್ಧ ಪ್ರತಿಭಟನೆ

ಪ್ರಕೃತಿಯಿಂದಾಗುವ ಅನಾಹುತಗಳ ತಡೆಗೆ ಪ್ರಕೃತಿಯಲ್ಲೇ ಪರಿಹಾರವಿದೆ ಎಂದು ಅಭಿಪ್ರಾಯಪಟ್ಟರು.

ಸಿಐಟಿಯ ಕಾರ್ಯದರ್ಶಿ ಸಿ.ರಾಕೇಶ್ ಪೂವಯ್ಯ, ಪ್ರಾಂಶುಪಾಲರಾದ ಪಿ.ಸಿ.ಕವಿತಾ ಹಾಗೂ ಹೆಚ್‍ಒಡಿ ಪ್ರಮುಖ್ ಗಣಪತಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು