ನಂಜನಗೂಡು: ಪ್ರೀತಿಸಿ ಮದುವೆಯಾದ ಪತ್ನಿ ತವರಿಗೆ ತೆರಳಿ ಹಿಂತಿರುಗದ ಹಿನ್ನಲೆಯಲ್ಲಿ ಬೇಸತ್ತ ಪತಿ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೇವನೂರು ಗ್ರಾಮದಲ್ಲಿ ನಡೆದಿದೆ.
ದೇವನೂರು ಗ್ರಾಮದ ನಿವಾಸಿ ರತ್ನಮ್ಮ ಮತ್ತು ಬಸವರಾಜು ದಂಪತಿಯ ಪುತ್ರ ವಿಘ್ನೇಶ್(22) ಆತ್ಮಹತ್ಯೆಗೆ ಶರಣಾದವನು. ಈತ ಅದೇ ಗ್ರಾಮದ ಪರಶಿವಪ್ಪ ಎಂಬುವವರ ಪುತ್ರಿ ಸೌಜನ್ಯ(20) ಎಂಬ ಕಾಲೇಜು ವಿದ್ಯಾರ್ಥಿಯನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದನು.
ಈ ನಡುವೆ ಇವರಿಬ್ಬರು ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದು ಮನೆಯವರ ವಿರೋಧದ ನಡುವೆ ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ದೇವಾಲಯಲ್ಲಿ ಮದುವೆಯಾಗಿದ್ದಾರೆ.
ಇದಾದ ಬಳಿಕ ಗ್ರಾಮಕ್ಕೆ ಅವರಿಬ್ಬರು ಮರಳಿ ಬಂದಿದ್ದು, ಸೌಜನ್ಯ ಒಂದು ದಿನ ಕಾಲ ವಿಘ್ನೇಶ್ ಮನೆಯಲ್ಲಿ ಕಳೆದಿದ್ದು ಮಾರನೆಯ ದಿನ ತನ್ನ ಮನೆಗೆ ತೆರಳಿ ಬಟ್ಟೆ ತರುವುದಾಗಿ ಹೇಳಿ ಹೋಗಿದ್ದಾಳೆ. ಹೀಗೆ ಹೋದ ಆಕೆಯನ್ನು ಹೆತ್ತವರು ಮನೆಯಿಂದ ಹೊರಗೆ ಬರದಂತೆ ಗೃಹಬಂಧನಲ್ಲಿಟ್ಟಿದ್ದಾರೆ.
ಅಷ್ಟೇ ಅಲ್ಲದೆ ಸೌಜನ್ಯಳ ಮನೆಯರು ನಮ್ಮ ಮಗಳನ್ನು ವಿಘ್ನೇಶ್ ಅಪಹರಿಸಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಘ್ನೇಶ್ ಸೇರಿದಂತೆ ಪೋಷಕರನ್ನು ವಿಚಾರಣೆಗೊಳಪಡಿಸಿದ್ದಾರೆ. ಇದರಿಂದ ನೊಂದ ವಿಘ್ನೇಶ್ ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ಮೃತ ವಿಘ್ನೇಶ್ನ ತಾಯಿ ರತ್ನಮ್ಮ ದೊಡ್ಡ ಕೌಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.