ಚಾಮರಾಜನಗರ: ಅರವಳಿಕೆಯ ಹೈಡೋಸ್ ನಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯತನದಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತ ವ್ಯಕ್ತಿಯ ಸಂಬಂಧಿಕರು ಹನೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಚಾಮರಾಜನಗರ ಜಿಲ್ಲೆಯ ಹನೂರಿನ ಹಾಲಿನ ವ್ಯಾಪಾರಿ ಸುರೇಶ್ (42) ಮೃತಪಟ್ಟಿರುವ ದುರ್ದೈವಿ.
ಇತ್ತೀಚೆಗಷ್ಟೆ ಸುರೇಶ್ ಅಪಘಾತಕ್ಕೊಳಗಾಗಿ ಎರಡು ಕಾಲಿಗೂ ಕಬ್ಬಿಣದ ರಾಡ್ ಹಾಕಿಸಿಕೊಂಡಿದ್ದರು. ಸೋಮವಾರ ರಾಡ್ ತೆಗೆಸಲು ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಡಾ. ರಾಜಶೇಖರಮೂರ್ತಿ ಎಂಬ ವೈದ್ಯ ಅರವಳಿಕೆ ನೀಡಿದ್ದಾರೆ. ಅರವಳಿಕೆ ಚುಚ್ಚು ಮದ್ದು ನೀಡುತ್ತಿದ್ದಂತೆ ಪ್ರಜ್ಞಾಹೀನರಾಗಿದ್ದು, ಕೂಡಲೇ ವೈದ್ಯರೇ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಲೋ ಬಿಪಿಯಿಂದ ಮೃತಪಟ್ಟಿದ್ದಾರೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಮೃತ ವ್ಯಕ್ತಿಯ ಸಂಬಂಧಿಕರು ಆರೋಪ ಮಾಡಿದ್ದಾರೆ.