ಕಾರವಾರ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಕಾರವಾರ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಹರೀಶ್ಕುಮಾರ್ ಸರಿಯಾಗಿ ದಾಸ್ತಾನು ಲೆಕ್ಕ ಕೊಡದ ಸಗಟು ಮಳಿಗೆ ವ್ಯವಸ್ಥಾಪಕರಿಗೆ ತರಾಟೆಗೆ ತೆಗೆದುಕೊಂಡ ಘಟನೆ ಕಾರವಾರದಲ್ಲಿ ನಡೆಯಿತು.
ಕಾರವಾರ ನಗರದಲ್ಲಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಪರಿಶೀಲನೆಗೆಂದು ತೆರಳಿದ್ದ ವೇಳೆ ಸಮೀಪದಲ್ಲಿಯೇ ಇದ್ದ ಆಹಾರ ನಿಗಮದ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿ ಅವರು, ಪ್ರಸಕ್ತ ಮಾಹೆಯ ದಾಸ್ತಾನು ಮತ್ತು ವಿತರಣೆ ಕ್ರಮಬದ್ಧತೆ ಬಗ್ಗೆ ಪರಿಶೀಲಿಸಿದರು.
ಸಗಟು ಮಳಿಗೆಯಲ್ಲಿ ನಮೂದಿಸಿರುವ ಮಾಹಿತಿಗೂ ಹಾಗೂ ದಾಸ್ತಾನು ಮಾಹಿತಿಗೂ ತಾಳೆ ಆಗದ ಕಾರಣ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ವ್ಯವಸ್ಥಾಪಕರಿಗೆ ಸೂಚಿಸಿದರು. ಲೆಕ್ಕ ಪರಿಶೀಲನೆ ಸಂದರ್ಭಲ್ಲಿ ವ್ಯವಸ್ಥಾಪಕರಿಂದ ಸರಿಯಾದ ಪ್ರತ್ಯುತ್ತರ ಬಾರದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಧಿಕಾರಿ ತೀವ್ರ ತರಾಟೆಗೆ ತೆಗೆದುಕೊಂಡರು.
ಸೂಚನಾ ಫಲಕದಲ್ಲಿರುವ ಮಾಹಿತಿಗೂ ದಾಸ್ತಾನುವಹಿಗೂ ತಾಳೆಯಾಗುತ್ತಿಲ್ಲರುವುದರಿಂದ ನಿಮ್ಮ ವಿರುದ್ಧ ಯಾಕೆ ಕ್ರಮಕ್ಕೆ ಜರುಗಿಸಬಾರದು ಎಂದು ಹೇಳಿದ ಅವರು, ಬೈತಕೋಲದಲ್ಲಿರುವ ದಾಸ್ತಾನು ಪರಿಶೀಲಿಸಿ ತಾಳೆಯಾಗದಿದ್ದರೆ ನೋಟಿಸ್ ಜಾರಿಮಾಡುವಂತೆ ಸ್ಥಳದಲ್ಲಿದ್ದ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ್ ಅವರಿಗೆ ಸೂಚಿಸಿದರು. ಅಲ್ಲದೆ ಬೈತಕೋಲದಲ್ಲಿರುವ ದಾಸ್ತಾನು ಪರಿಶೀಲಿಸಿ ವರದಿ ನೀಡುವಂತೆ ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೋಹನ್ರಾಜಗೆ ಜಿಲ್ಲಾಧಿಕಾರಿ ನಿಯೋಜಿಸಿದ್ದರು.
ಬೈತಕೋಲದಲ್ಲಿರುವ ನಿಗಮದ ಕೇಂದ್ರ ಉಗ್ರಾಣದಲ್ಲಿ ಪರಿಶೀಲಿಸಿದ ನಂತರ ಪ್ರಸಕ್ತ ಮಾಹೆಯಲ್ಲಿ ೧೫೬೩೪ ಚೀಲ ಅಕ್ಕಿ ದಾಸ್ತಾನು ಇರಬೇಕಿತ್ತು. ಈ ಪೈಕಿ ಕೆಇಬಿ ಕಾಲೋನಿಯಲ್ಲಿರುವ ಸಗಟು ಮಳಿಗೆಯಲ್ಲಿ ೬೯೮೭ ಚೀಲ ಇದ್ದು ಬೈತಕೋಲದಲ್ಲಿ೭೯೦೯ ಚೀಲ ಇದೆ. ಈ ಪೈಕಿ ೭೩೯ ಚೀಲ ಅಕ್ಕಿ ಕಡಿಮೆ ಇರುವ ಬಗ್ಗೆ ಮಾಹಿತಿಯಿಂದ ಲಭ್ಯವಾಗಿದೆ ಈ ಕುರಿತು ಜಿಲ್ಲಾಧಿಕಾರಿಯವರಿಗೆ ವರದಿ ನೀಡುವುದಾಗಿ ಮೋಹನ್ರಾಜ್ ತಿಳಿಸಿದರು.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ವ್ಯವಸ್ಥಾಪಕ ಹೇಮಚಂದ್ರಶೆಟ್ಟಿ ಅವರು, ದಾಸ್ತಾನು ವಹಿಯಲ್ಲಿರುವ ದಾಸ್ತಾನು ಲೆಕ್ಕಾಚಾರದಂತೆ ಎಲ್ಲವೂ ಸರಿಯಾಗಿದೆ. ಕಡಿಮೆ ಇರವುದಾಗಿ ಕಾಣುತ್ತಿರುವ ಅಕ್ಕಿಯನ್ನು ಈಗಾಗಲೇ ವಿತರಣೆ ಮಾಡಲಾಗಿದ್ದು ದಾಸ್ತಾನುವಹಿಯಲ್ಲಿ ನಮೂದಿಸಲಾಗಿದೆ ಎಂದು ಹೇಳಿದ್ದಾರೆ.ಆದರೆ ಪ್ರಸ್ತುತ ಮಾಹಿತಿಯಂತೆ ದಾಸ್ತಾನಿಗಿಂತಲೂ ಹೆಚ್ಚು ಚೀಲ ಅಕ್ಕಿ ದಾಸ್ತಾನು ಕಂಡು ಬರುತ್ತಿರುವ ಬಗ್ಗೆ ಕೇಳಿದಾಗ ಪ್ರತಿ ೧೦ ಟನ್ಗೆ ಒಂದು ಚೀಲ ಅಕ್ಕಿ ಹೆಚ್ಚುವರಿಯಾಗಿ ದಾಸ್ತಾನು ಆಗುತ್ತದೆ. ಈಹಿನ್ನೆಲೆಯಲ್ಲಿ ಲೆಕ್ಕಾಚಾರದಂತೆ ೮೪ ಚೀಲ ಹೆಚ್ಚುವರಿಯಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡುವುದಾಗಿ ತಿಳಿಸಿದರು. ಬಳಿಕ ಜಿಲ್ಲಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
v