ಮಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ದೀಕ್ಷಾ ದೇರಳಕಟ್ಟೆ ಆಸ್ಪತ್ರೆಯಲ್ಲಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದ ಹಾಗೂ ವೈದ್ಯರ ಮೂಲಗಳಿಂದ ತಿಳಿದುಬಂದಿದೆ.
ಐಸಿಯುವಿನಲ್ಲೇ ಚಿಕಿತ್ಸೆ ಮುಂದುವರಿಸಲಾಗಿದ್ದು 7 ತಜ್ಞ ವೈದ್ಯರು ದೀಕ್ಷಾಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆ ಹಿನ್ನೆಲೆ: ಜೂ.28ರಂದು ಹಾಡಹಗಲೇ ಬಗಂಬಿಲ ನಿವಾಸಿ ದೀಕ್ಷಾಳ ಮೇಲೆ ಸುಶಾಂತ್ ಎಂಬಾತ ಭೀಕರವಾಗಿ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದ. ಡ್ಯಾನ್ಸ್ ಟೀಚರ್ ಆಗಿರುವ ಸುಶಾಂತ್(28) ತನ್ನ ತರಗತಿಗೆ ಬರುತ್ತಿದ್ದ ದೀಕ್ಷಾಳನ್ನು ಪ್ರೀತಿಸುತ್ತಿದ್ದ. ಆದರೆ ಈತನ ಪ್ರೀತಿಯನ್ನು ದೀಕ್ಷಾ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಸುಶಾಂತ್ ಜೂ. 28ರಂದು ಮನೆಗೆ ಹಿಂತಿರುಗುತ್ತಿದ್ದ ದೀಕ್ಷಾಳ ವೇಳೆ ಮಾರ್ಗಮಧ್ಯದಲ್ಲೇ 12 ಬಾರಿ ಚಾಕುವಿನಿಂದ ಚುಚ್ಚಿದ್ದಾನೆ.
ದೀಕ್ಷಾಳ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಗಂಭೀರವಾದ ಗಾಯವಾಗಿತ್ತು. ರಕ್ಷಣೆಗೆ ಹೋದ ಜನರನ್ನು ಬೆದರಿಸಿ ತಾನೂ ಚಾಕುವಿನಿಂದ ಇರಿದುಕೊಂಡಿದ್ದಾನೆ. ಸ್ಥಳಕ್ಕೆ ಆಂಬ್ಯುಲೆನ್ಸ್ ಆಗಮಿಸುತ್ತಿದ್ದಂತೆ ಸುಶಾಂತ್ ಚಾಕು ಎಸೆದು ದೀಕ್ಷಾಳ ಮೇಲೆ ಬಿದ್ದಿದ್ದಾನೆ. ನರ್ಸ್ ಗಳನ್ನು ಹತ್ತಿರ ಬರಲು ಬಿಡದ ಸುಶಾಂತ್ ನನ್ನು ಎಳೆದು ದೀಕ್ಷಾಳನ್ನು ಕೂಡಲೇ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ದೀಕ್ಷಾ ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಸುಶಾಂತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.