News Kannada
Wednesday, October 05 2022

ಕರ್ನಾಟಕ

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಕ್ಕೆ ಕ್ಷಮೆ ಇರಲಿ: ಶಿವರಾಮ್ ಹೆಬ್ಬಾರ್ - 1 min read

Photo Credit :

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಕ್ಕೆ ಕ್ಷಮೆ ಇರಲಿ: ಶಿವರಾಮ್ ಹೆಬ್ಬಾರ್

ಕಾರವಾರ: ರಾಜ್ಯದಲ್ಲಿ ಬದಲಾದ ರಾಜಕೀಯ ವಿದ್ಯಮಾನದಲ್ಲಿ ತಮ್ಮ ಶಾಸಕ‌ ಸ್ಥಾನಕ್ಕೆ ರಾಜಿನಾಮೆ ನೀಡಿದವರಲ್ಲಿ ಒಬ್ಬರಾಗಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಶಾಸಕ‌ ಶಿವರಾಮ್ ಹೆಬ್ಬಾರ್ ತಮ್ಮ ರಾಜೀನಾಮೆಯ ಕಾರಣಗಳನ್ನು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಶಾಸಕ‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅತೃಪ್ತ ಶಾಸಕರೊಂದಿಗೆ ಮುಂಬಯಿನಲ್ಲಿರುವ‌ ಹೆಬ್ಬಾರ್ ತಮ್ಮ ರಾಜೀನಾಮೆಯ ಕಾರಣಗಳನ್ನು ಹೇಳಿಕೊಂಡಿದ್ದಾರೆ. ಅಲ್ಲದೆ‌ ರಾಜೀನಾಮೆ ನೀಡಿದ್ದಕ್ಕಾಗಿ ಕ್ಷೇತ್ರದ ಜನರಲ್ಲಿ ಫೇಸ್ ಬುಕ್ ಮೂಲಕವೇ ಕ್ಷಮೆ ಯಾಚಿಸಿದ್ದಾರೆ.

ರಾಜೀನಾಮೆ ಸಲ್ಲಿಸಿದ ಶಿವರಾಮ್ ಹೆಬ್ಬಾರ್ ತಮ್ಮ ಫೆಸ್ ಬುಕ್ ನಲ್ಲಿ ಬರೆದುಕೊಂಡಿದ್ದು‌ ಇಂತಿದೆ:

ನನ್ನ ಆತ್ಮೀಯ,
ಕಾರ್ಯಕರ್ತರಲ್ಲಿ ಮತ್ತು ಮತದಾರ ಬಾಂಧವರಲ್ಲಿ ಇತ್ತೀಚಿನ ಹಠಾತ್ ರಾಜಕೀಯ ಬೆಳವಣಿಗೆ ಹಾಗೂ ಗೊಂದಲಗಳ ಕುರಿತು ಕ್ಷಮೆಯಾಚಿಸುತ್ತಾ , ಇಂಥ ಕಠಿಣ ನಿರ್ಧಾರಕ್ಕೆ ಬರಲೇಬೇಕಾದ ನನ್ನ ಅನಿವಾರ್ಯತೆ ಅಥವಾ ಅಸಹಾಯಕತೆಯ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ . ಮಾನ್ಯರೇ , ಅಭಿವೃದ್ದಿಯನ್ನೇ ಮಾನದಂಡವಾಗಿರಿಸಿಕೊಂಡು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಾನು, ಈ ಮೈತ್ರಿ ಸರ್ಕಾರದಲ್ಲಿ ಸತತ 15 ತಿಂಗಳಲ್ಲಿ ತೀವ್ರ ಪ್ರಯತ್ನದ ಹೊರತಾಗಿಯೂ, ನನ್ನ ಕ್ಷೇತ್ರಕ್ಕೆ ಯಾವ ಹೊಸ ಯೋಜನೆಗಳನ್ನೂ ತರವಲ್ಲಿ ಯಶಸ್ಸು ಕಾಣಲಿಲ್ಲ. ಸರ್ಕಾರದ ತಾರತಮ್ಯ ನೀತಿ ಒಂದೆಡೆಯಾದರೆ, ಪಕ್ಷದ ಹಿರಿಯ ನಾಯಕರೂ ಕೂಡ ನಮ್ಮ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ತೋರಿಸಲಿಲ್ಲ ಹಾಗೂ ಮುಂದೆ ನಿಂತು ಸಮಸ್ಯೆ ಬಗೆರಿಹರಿಸಬೇಕಾಗಿದ್ದ ಜಿಲ್ಲಾ ಮಂತ್ರಿಗಳಿಗಂತೂ ಜಿಲ್ಲೆಯಿಂದ ಆರಿಸಿಬಂದ ಪಕ್ಷದ ಇನ್ನೊಬ್ಬ ಶಾಸಕನಾದ ನನ್ನ ಕ್ಷೇತ್ರದ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಕನಿಷ್ಠ ಕಾಳಜಿಯನ್ನು ತೋರಲಿಲ್ಲ. ನಮ್ಮದು ಮಲೆನಾಡು ಜಿಲ್ಲೆಗಳಲ್ಲಿಯೇ ಭೌಗೋಳಿಕವಾಗಿ ಅತ್ಯಂತ ದೊಡ್ಡ ಕ್ಷೇತ್ರ. ಕಾರ್ಯಕರ್ತರು, ಸಾರ್ವಜನಿಕರು, ವಿಶೇಷವಾಗಿ ನೀರಾವರಿ / ರಸ್ತೆಗಳು, ಆಸ್ಪತ್ರೆ ಹೀಗೆ ಹಲವು ಅರ್ಹ ಬೇಡಿಕೆ ಇದ್ದರೂ ಅದರ ಬಗ್ಗೆ ಸರ್ಕಾರದಿಂದ ಯಾವ ಬೆಂಬಲವೂ ಸಿಗುತ್ತಿಲ್ಲ, ಹೀಗೇ ಮುಂದುವರೆದರೆ ಅಭಿವೃದ್ದಿಯ ಹೆಸರಲ್ಲಿ ಗೆಲ್ಲಿಸಿದ ಕ್ಷೇತ್ರದ ಮತದಾರರಿಗೆ ಮುಖ ತೋರಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ.

ನನ್ನ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡ ಮಾಹಾತ್ವಾಕಾಂಕ್ಷಿ ಯೋಜನೆಯಾದ ರೈತರಿಗೆ ಹಾಗೂ ಕೃಷಿಕರಿಗೆ ಅತ್ಯಂತ ಮಹತ್ವದ, ಹಲವಾರು ಕೆರೆ ತುಂಬುವ ಹಾಗೂ ಏತ ನೀರಾವರಿ ಯೋಜನೆಗಳನ್ನೂ ಪೂರ್ತಿಗೊಳಿಸುವುದಕ್ಕೆ ಹಾಗೂ ಮುಂದುವರಿದ ಎರಡನೇ ಹಂತದ ಯೋಜನೆಗೆ ಎಷ್ಟು ಬಾರಿ ಕೋರಿದರೂ ಈ ಸರ್ಕಾರದಿಂದ ಸರಿಯಾದ ಬೆಂಬಲ ಸಿಗಲಿಲ್ಲ. ರಾಜ್ಯಾದ್ಯಂತ ಬಿಜೆಪಿ ಅಲೆಯಿದ್ದರೂ ಅಭಿವೃದ್ದಿಯನ್ನಷ್ಟೇ ಪರಿಗಣಿಸಿ ನನ್ನನ್ನು ಆರಿಸಿ ಕಳಿಸಿದ ನನ್ನ ಕ್ಷೇತ್ರದ ಜನರಿಗೆ ಯಾವ ಹೊಸ ಯೋಜನೆಗಳನ್ನೂ ತರಲಾಗದೇ, ತಂದ ಯೋಜನೆಯನ್ನು ಜಾರಿಗೊಳಿಸದೆ, ಸಮರ್ಥಿಸಿಕೊಳ್ಳುವುದಾದರೂ ಹೇಗೆ? ನೀವೆಲ್ಲರೂ ನನ್ನನ್ನು 15-20 ವರ್ಷದಿಂದ ಹತ್ತಿರದಿಂದ ನೋಡಿದ್ದೀರಿ ಹಾಗೂ ನನ್ನ ವ್ಯಕ್ತಿತ್ವವನ್ನು ಬಲ್ಲಿರಿ. ಹಗಲೂ ರಾತ್ರಿ ನನ್ನ ಪರವಾಗಿ ಹಲವಾರು ಚುನಾವಣೆಯಲ್ಲಿ ಶ್ರಮಿಸಿದ್ದೀರಿ. ನಿಮ್ಮ ಶ್ರಮವನ್ನು ನಾನೆಂದೂ ಮರೆಯಲಾರೆ. ನನ್ನ ಕಾರ್ಯಕರ್ತರ ಹಾಗೂ ಮತದಾರರ ಬೆಂಬಲದಿಂದ ಎರಡನೇ ಬಾರಿ ಶಾಸಕನಾಗಿದ್ದೇನೆ. ನನ್ನ ಮೊದಲೂ ಈ ಪ್ರದೇಶಕ್ಕೆ ಬೇರೆಯವರು ಶಾಸಕರಾಗಿದ್ದಾರೆ ಹಾಗೂ ನನ್ನ ನಂತರವೂ ಆಗುತ್ತಾರೆ. ಆದರೆ, ನನಗೆ ಸಿಕ್ಕಿರುವ ಅವಕಾಶದಲ್ಲಿ ನನ್ನ ಕ್ಷೇತ್ರದ ಜನರಿಗೆ/ರೈತರಿಗೆ ಬಹುಕಾಲ, ಮುಂದಿನ ಪೀಳಿಗೆಯೂ ನೆನಪಿಡುವಂತಹ ಶಾಶ್ವತ ಬೃಹತ್ ನೀರಾವರಿ ಯೋಜನೆಗಳನ್ನು ಈಗಾಗಲೇ ಕೈಗೆತ್ತಿಕೊಂಡಿದ್ದೇನೆ. ಏನೇ ಬೆಲೆ ತೆತ್ತಾದರೂ ಅದನ್ನು ಪೂರ್ಣಗೊಳಿಸಿ, ನನ್ನದೇ ಆದ ಅಭಿವೃದ್ಧಿಯ ಹೆಜ್ಜೆ ಗುರುತನ್ನು ಬಿಡುವ ಅಚಲ ವಿಶ್ವಾಸ ಹೊಂದಿದ್ದೇನೆ. ನನ್ನ ಕ್ಷೇತ್ರದ ಹಿತಾಸಕ್ತಿ ಬಿಟ್ಟು, ಯಾವುದೇ ಹಣ, ಆಸೆ ಆಮಿಷಗಳಿಗೆ ನನ್ನ ನೈತಿಕತೆಯನ್ನು ಮಾರಿಕೊಳ್ಳುವ ವ್ಯಕ್ತಿತ್ವ ಖಂಡಿತವಾಗಿಯೂ ನನ್ನದಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದನಂತರ ದಿನಂಪ್ರತಿ ಎರಡೂ ಪಕ್ಷಗಳ ನಾಯಕರ ಕಚ್ಚಾಟ ಹಾಗೂ ಸ್ವಹಿತಾಸಕ್ತಿಗಳಿಂದಲೇ ಸುದ್ದಿಯಲ್ಲಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳಾಗದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

See also  ನೀರಿನಲ್ಲಿ ಕ್ರಿಮಿನಾಶಕ: ಮತ್ತೇ ನಾಲ್ವರು ಅಸ್ವಸ್ಥ

ಅದರ ಭಾಗವಾದ ನಾವು, ಹಲವಾರು ಬಾರಿ ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗಿದ್ದೇವೆ. ಈ ಮೈತ್ರಿಯಿಂದ ಪಕ್ಷಕ್ಕೂ ಕೂಡ ಭರಿಸಲಾಗದ ಹಾನಿಯಾಗಿದೆ. ಇದೇ ರೀತಿ ಅಭಿವೃದ್ದಿ ಇಲ್ಲದೇ ಮಂದುವರಿದರೆ ಚುನಾವಣೆಯಲ್ಲಿ ಮುಂದೆ ಮತಕೇಳಲು ಕಷ್ಟವಾದೀತು. ನನ್ನ ರಾಜೀನಾಮೆ ನಿನ್ನೆ-ಮೊನ್ನೆ ನಡೆದ ಹಠಾತ್ ಬೆಳವಣಿಗೆಯಲ್ಲ. ಸತತ 15 ತಿಂಗಳು ಅಳೆದೂ-ತೂಗಿ, ಪಕ್ಷದ/ಸರ್ಕಾರದ ಪರಿಮಿತಿಯಲ್ಲಿ ಎಲ್ಲಾ ಪ್ರಯತ್ನಗಳೂ ಮುಗಿದ ಮೇಲೆ, 3 ತಿಂಗಳು ಮುಂಚಿತವಾಗಿಯೇ ಮುಖಂಡರಿಗೆ ತಿಳಿಸಿ, ಅನಿವಾರ್ಯವಾಗಿ, ಸರ್ಕಾರದ ಧೋರಣೆಯಿಂದ ಬೇಸತ್ತಿದ್ದ ಹಲವು ಸಮಾನ ಮನಸ್ಕ ಶಾಸಕರೊಡನೆ ಸಮಾಲೋಚಿಸಿ, ಈ ನಿರ್ಧಾರಕ್ಕೆ ಬಂದಿರುತ್ತೇನೆ. ಅಭಿವೃದ್ಧಿಯಿಲ್ಲದೇ ಇದ್ದರೂ 5 ವರ್ಷ ಸಿಕ್ಕ ಅಧಿಕಾರವನ್ನು ಅನುಭವಿಸಿ, ಶಾಸಕನಾಗೇ ಮುಂದುವರೆಯುವುದು ಸುಲಭದ ಆಯ್ಕೆಯಾಗಿತ್ತು. ಆದರೆ ಕ್ಷೇತ್ರದ ಹಿತಾಸಕ್ತಿಗಾಗಿ ರಾಜೀನಾಮೆ ಕೊಟ್ಟು, ಅದರ ಪರಿಣಾಮಗಳನ್ನು ಎದುರಿಸಿ, ಪಕ್ಷದ ನಾಯಕರ ಸಿಟ್ಟು, ಅಧಿಕಾರದ ಬಲಪ್ರಯೋಗಗಳನ್ನೂ ಎದುರಿಸಿ, ಮತ್ತೆ ಜನರ ಬಳಿ ಹೋಗುವ ಗಟ್ಟಿಯಾದ ನಿರ್ಧಾರ ಮಾಡಿದ್ದೇನೆ.

ಆದರೆ ಇನ್ನೂ ಪಕ್ಷದಲ್ಲಿಯೇ ಇದ್ದೇನೆ. ಅತೀ ಶೀಘ್ರದಲ್ಲಿಯೇ ಕ್ಷೇತ್ರಾದ್ಯಂತ ಸಂಚರಿಸಿ ಎಲ್ಲ ಕಾರ್ಯಕರ್ತರಲ್ಲಿ ಈ ಎಲ್ಲ ವಿಷಯ ಚರ್ಚಿಸಿ ಮುಂದಿನ ನಿರ್ಧಾರ ಕೈಗುಳ್ಳುತ್ತೇನೆ.

ಆದರೂ ಈ ಎಲ್ಲಾ ರಾಜಕೀಯ ಬೆಳವಣಿಗೆಗಳು, ಕ್ಷೇತ್ರದಿಂದ 8-10 ದಿನ ಹೊರಗುಳಿಯಬೇಕಾದ ಅನಿವಾರ್ಯತೆ, ಎಲ್ಲದಕ್ಕೂ ನಾನು ಮನಃಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ. ನಾನೂ ಎಲ್ಲೇ ಇರಲಿ ಎಲ್ಲ ವರ್ಗದ ಜನರು ಹಾಗೂ ನನ್ನ ಕಾರ್ಯಕರ್ತರನ್ನು ವಿಶ್ವಾಸದಿಂದ ನಡೆಸಿಕೊಂಡು ಹೋಗುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ. ಇನ್ನೂ ಹೆಚ್ಚಿನ ರೀತಿಯ ಅಭಿವೃದ್ಧಿ ಕೆಲಸಗಳು ಮುಂದುವರಿಯಲಿದೆ ಎಂಬ ಭರವಸೆ ಇದ್ದು ನಿಮ್ಮಲ್ಲರ ಸಹಕಾರವಿರಲಿ ಎಂದು ಶಿವರಾಮ ಹೆಬ್ಬಾರ ಬರೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು