ಮಡಿಕೇರಿ: ಕೊಡಗು ಜಿಲ್ಲೆ ಕಂಡು ಕೇಳರಿಯದ ಮಹಾಮಳೆಗೆ ಸಿಲುಕಿದ್ದು, ಸಂಕಷ್ಟದಲ್ಲರಿವವರಿಗೆ ಪೂರಕ ಸ್ಪಂದನವನ್ನು ನೀಡಲಾಗುತ್ತಿದೆ. ನೆರೆ ಪೀಡಿತ ಪ್ರದೇಶಗಳಿಗೆ ಅಗತ್ಯ ನೆರವನ್ನು ಒದಗಿಸಲು ಹಣದ ಕೊರತೆ ಇಲ್ಲವೆಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅತಿವೃಷ್ಟಿ ಪೀಡಿತ ಜಿಲ್ಲೆಗಳಿಗೆ ತೆರಳಿ, ಅಲ್ಲಿನ ಸಂಕಷ್ಟಗಳನ್ನು ಅರಿತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ತಂಡಗಳನ್ನು ರಚಿಸಿದ್ದು, ಅದರಂತೆ ಇಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಶಾಸಕರ ತಂಡ ಜಿಲ್ಲೆಗೆ ಆಗಮಿಸಿ ಇಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿರುವುದಾಗಿ ಮಾಹಿತಿ ನೀಡಿದರು.
ಸಂಕಷ್ಟಗಳ ತುರ್ತು ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ನಿಧಿಯಲ್ಲಿ 58 ಕೋಟಿ ರೂ. ಇರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ಮಹಾಮಳೆಯಿಂದ ಉಂಟಾಗುತ್ತಿರುವ ಸಂಕಷ್ಟಗಳನ್ನು ಅರಿತು ಕೇಂದ್ರದ ಎನ್‍ಡಿಆರ್‍ಎಫ್‍ನಿಂದ ಅವಧಿಗೂ ಮುಂಚಿತವಾಗಿ 128 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ತಹಶೀಲ್ದಾರರ ಖಾತೆಗೆ 1 ಕೋಟಿ ರೂ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಅನಾಹುತಗಳು ಸಂಭವಿಸುತ್ತಿದ್ದು, ಇವುಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಪೂರಕವಾಗಿ ಈಗಾಗಲೆ ಜಿಲ್ಲೆಯ ಪ್ರತಿ ತಹಶೀಲ್ದಾರರ ಖಾತೆಗೆ 1 ಕೊಟಿ ರೂ.ಗಳನ್ನು ಒದಗಿಸಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ತಲಾ 50 ಸಾವಿರ ಮತ್ತು ಕುಶಾಲನಗರ ಮತ್ತು ವೀರಾಜಪೇಟೆ ಪಟ್ಟಣ ಪಂಚಾಯ್ತಿಗಳಿಗೆ ತಲಾ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸದಾನಂದ ಗೌಡ ಮಾಹಿತಿ ನೀಡಿದರು.
2 ಸಾವಿರ ಮಂದಿಗೆ ಆಶ್ರಯ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉದ್ಭವಿಸಿರುವ ನೆರೆ ಹಾವಳಿಗೆ ಸಿಲುಕಿ ಮನೆ ಮಠಗಳನ್ನು ಕಳೆÉದುಕೊಂಡ ಸುಮಾರು 600 ಕುಟುಂಬಗಳ 2 ಸಾವಿರಕ್ಕೂ ಹೆಚ್ಚಿನ ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ವಿವಿಧೆಡೆಗಳಲ್ಲಿ ಕಲ್ಪಿಸಲಾಗಿರುವ 25 ಗಂಜಿ ಕೇಂದ್ರಗಳಲ್ಲಿ ಆಶ್ರಯವನ್ನು ನೀಡಲಾಗಿದೆ. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಸಂಕಷ್ಟದಲ್ಲಿರುವವರಿಗೆ ನಿರಂತರವಾಗಿ ಸ್ಪಂದಿಸುವ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿದರು.
ಹೆಚ್ಚುವರಿ 2 ಎನ್‍ಡಿಆರ್‍ಎಫ್ ತಂಡಗಳು: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಮತ್ತು ಅದರಿಂದ ಉಂಟಾಗುತ್ತಿರುವ ಹಾನಿಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಾಗಲೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 1 ಎನ್‍ಡಿಆರ್‍ಎಫ್ ತಂಡದೊಂದಿಗೆ 2 ಹೆಚ್ಚಿನ ಎನ್‍ಡಿಆರ್‍ಎಫ್ ತಂಡದ ನೆರವನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರನ್ನು ರಕ್ಷಿಸುವ ಸಲುವಾಗಿ ಈಗಾಗಲೆ 24 ಬೋಟ್‍ಗಳನ್ನು ಬಳಸಲಾಗುತ್ತಿದ್ದು, ಹಾಸನದಿಂದ 2 ಹೆಚ್ಚುವರಿ ಬೋಟ್‍ಗಳನ್ನು ತರಿಸಿಕೊಳ್ಳಲಾಗಿದೆಯೆಂದು ಸದಾನಂದ ಗೌಡ ಅವರು ಮಾಹಿತಿ ನೀಡಿದರು.
ಏರ್ ಲಿಫ್ಟ್‍ಗೂ ಸಿದ್ಧ: ಕೊಡಗಿನ ಯಾವುದೇ ಪ್ರದೇಶದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಏರ್ ಲೀಫ್ಟ್ ಮಾಡಲು ಪ್ರಯತ್ನಿಸಲಾಗುವುದೆಂದು ಸದಾನಂದ ಗೌಡ ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯ ಬಹುತೇಕ ಭಾಗಗಳು ನೆರೆ ಹಾವಳಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವವರು ಕನಿಷ್ಠ ತಾವು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಮಾಹಿತಿಯನ್ನು ಪರಿಹಾರ ಕೇಂದ್ರಗಳಿಗೆ ಒದಗಿಸುವುದಕ್ಕೆ ಪೂರಕವಾಗಿ, ಎಲ್ಲೆಲ್ಲಿ ಬಿಎಸ್‍ಎನ್‍ಎಲ್ ಟವರ್‍ಗಳು ವಿದ್ಯುಚ್ಛಕ್ತಿ ಸರಬರಾಜಿಲ್ಲದೆ ಕಾರ್ಯಸ್ಥಗಿತಗೊಳಿಸಿದೆಯೋ ಅಂತಹ ಟವರ್‍ಗಳಲ್ಲಿ ಜನರೇಟರ್ ಮೂಲಕ ವಿದ್ಯುತ್ ಸೌಲಭ್ಯ ಒದಗಿಸಲು ಡೀಸೆಲ್ ವ್ಯವಸ್ಥೆ ಮಾಡಲು ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶೇಷ ತಂಡದ ಶಾಸಕರುಗಳಾದ ಸಿ.ಟಿ. ರವಿ, ವಿ. ಸೋಮಣ್ಣ, ಪ್ರೀತಂ ಗೌಡ ಹಾಗೂ ಜಿಲ್ಲೆಯ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ ಸಿಂಹ, ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಉಪಸ್ಥಿತರಿದ್ದರು.