ಮಂಡ್ಯ: ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆ ಯಾವುದೇ ಕ್ಷಣದಲ್ಲಾದರೂ ಭರ್ತಿಯಾಗುವ ನಿರೀಕ್ಷೆಯಿದೆ. ಕಳೆದ ಒಂದು ವಾರದ ಹಿಂದೆ 83 ಅಡಿಯಿದ್ದ ನೀರಿನ ಸಂಗ್ರಹ, ಸೋಮವಾರ 123 ಅಡಿ ತಲುಪಿದೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡದೆ ಹೋಗಿದ್ದರೆ ಈ ಹಿಂದೆಯೇ ಭರ್ತಿಯಾಗಿ ಬಿಡುತ್ತಿತ್ತು. ಆದರೆ ಮುಂಜಾಗ್ರತಾ ಕ್ರಮವಾಗಿ ಒಂದು ಲಕ್ಷ ಕ್ಯುಸೆಕ್‍ಗೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ.
ಗರಿಷ್ಠ 124.80 ಅಡಿ ಸಂಗ್ರಹ ಸಾಮಥ್ರ್ಯ ಹೊಂದಿರುವ ಅಣೆಕಟ್ಟೆಯಲ್ಲಿ ಕಳೆದ ವಾರ ಕೇವಲ 83 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ಒಂದು ವಾರದಿಂದ ಕಾವೇರಿ ಕಣಿವೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಣೆಕಟ್ಟೆಗೆ 2 ಲಕ್ಷ ಕ್ಯೂಸೆಕ್ಸ್‍ಗೂ ಅಧಿಕ ನೀರು ಹರಿದುಬರುತ್ತಿದ್ದು, ಒಂದು ವಾರದಲ್ಲೇ ಅಣೆಕಟ್ಟೆ ಭರ್ತಿಯಾಗಿದ್ದು, ದಾಖಲೆ ನಿರ್ಮಿಸಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ 1.5 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ಪ್ರಮಾಣದ ಒಳಹರಿವು ಹರಿದು ಬರುತ್ತಿದ್ದು, ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಮೂರ್ನಾಲ್ಕು ದಿನಗಳಿಂದಲೂ ಒಂದು ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಮುಳುಗಡೆ ಭೀತಿ ಎದುರಾಗಿದೆ.
ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಟ್ಟಣದ ಸ್ನಾನ ಘಟ್ಟ ಬಳಿಯ ಕಾವೇರಿ ನದಿ ತಟದಲ್ಲಿದ್ದ ದೇವಸ್ಥಾನಗಳು, ಪಶ್ಚಿಮವಾಹಿನಿಯ ಲ್ಲಿರುವ ಪುರಾತನ ಮಂಟಪ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜಲಾವೃತ ವಾಗಿವೆ. ಚೆಕ್ ಪೋಸ್ಟ್ ಬಳಿಯ ಸಾಯಿ ಮಂದಿರಕ್ಕೆ ಪ್ರವಾಹದ ನೀರು ನುಗ್ಗಿದೆ. ಶ್ರೀ ನಿಮಿಷಾಂಬ ದೇವಾಲಯದ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಭಕ್ತರ ಸ್ನಾನ ಗೃಹ ಜಲಾವೃತಗೊಂಡಿದ್ದು, ದೇವಾಲಯದ ಮುಖ್ಯದ್ವಾರದ ಬಳಿವರೆಗೆ ನೀರು ನುಗ್ಗಿದೆ. ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆಯ ಭೀತಿಯಲ್ಲಿದೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲೆ ಯಾವುದೇ ವಾಹನ ಸಂಚರಿಸಿದಂತೆ ನಿರ್ಬಂಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಪ್ರಮುಖ ಆಯ ಕಟ್ಟಿನ ಸ್ಥಳಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹೊರಹರಿವಿನ ಪ್ರಮಾಣ 1.8 ಲಕ್ಷ ಕ್ಯೂಸೆಕ್ಸ್ ದಾಟಿದರೆ ಬಹುತೇಕ ನದಿ ಪಾತ್ರದ ದೇವಾಲಯಗಳು ಮುಳುಗಡೆಯಾಗುವ ಸಂಭವ ಹೆಚ್ಚಾಗಲಿದ್ದು, ಜಲಾಶಯದಿಂದ ಹೆಚ್ಚಿನ ಪ್ರಮಾಣದ ಹೊರ ಹರಿವಿನಿಂದ ನದಿ ಪಕ್ಕದ ಗ್ರಾಮಗಳಿಗೆ ಪ್ರವಾಹ ಭೀತಿ ಹೆಚ್ಚಿದ್ದು, ಆತಂಕ ಸೃಷ್ಟಿಯಾಗಿದೆ.