ಕಾರವಾರ: ಮುಂಬರುವ 2022 ರೊಳಗಾಗಿ ಸಪಾಯಿ ಕರ್ಮಚಾರಿಗಳಿಗಾಗಿಯೇ ಸಮಾನ ಕೆಲಸಕ್ಕೆ ಸಮಾನ ವೇತನ, ಆರೋಗ್ಯ, ಸ್ವಂತ ಮನೆ ನಿರ್ಮಾಣ ಹಾಗೂ ಅವರ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಆಯೋಗದ ಮುಖ್ಯ ಉದ್ದೇಶವಾಗಿದೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಥಳಿಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಸಪಾಯಿ ಕರ್ಮಚಾರಿ ಅವಲಂಬಿತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 25 ಲಕ್ಷ ರೂ. ವರೆಗೆ ಸಾಲ, ವಸತಿ, ಆರೋಗ್ಯ ವಿಮೆ ಸೌಲಭ್ಯ ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಎಲ್ಲ ಪೌರಕಾರ್ಮಿಕರಿಗೆ ತಲುಪಿಸಬೇಕೆಂದು ಸೂಚಿಸಿದರು.
ಸಪಾಯಿ ಕರ್ಮಚಾರಿಗಳಿಗೆ ಯಾವುದೇ ರೀತಿಯ ಸೇವಾ ಭದ್ರತೆ ಇಲ್ಲ. ಇವರನ್ನು ಖಾಯಂಗೊಳಿಸಿದರೆ ಮಾತ್ರ ವಿಕಾಸ ಹೊಂದಲು ಸಾಧ್ಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗುವುದು. ಗುತ್ತಿಗೆ ಆದಾರದಲ್ಲಿ ಕೆಲಸ ಮಾಡುತ್ತಿರುವ ಸಪಾಯಿ ಕರ್ಮಚಾರಿಗಳನ್ನು ಇನ್ನು ಎರಡು ತಿಂಗಳಲ್ಲಿ ಖಾಯಂಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸರಕಾರ ಮಲ ಹೊರುವ ಪದ್ದತಿಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಸಹ, ಇನ್ನು ಜೀವಂತವಾಗಿರುವುದನ್ನು ಕಂಡು ವಿಷಾಧ ವ್ಯಕ್ತಪಡಿಸಿದ ಅವರು, ಇತ್ತಿಚಿಗೆ ಕಾರವಾರ ನಗರದ ಖಾಸಗಿ ಕಟ್ಟಡದ ಶೌಚಾಲಯಗುಂಡಿ ಸ್ವಚ್ಚಗೊಳಿಸುವಾಗ ಪೌರ ಕಾರ್ಮಿಕ ಕೋಟಯ್ಯ ಪೆದ್ದಬಾಲಯ್ಯ ಬುನಾದಿ ಮೃತಪಟ್ಟಿರುವುದು ವಿಷಾದನೀಯ ಸಂಗತಿಯಾಗಿದೆ. ಇಂತಹ ಪ್ರಕರಣಗಳಿಗೆ ಇನ್ನು ಮುಂದೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಂತಹ ಪ್ರಕರಣಗಳು ಮರಕಳಿಸದಿರುವಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಶೌಚಾಲಯ ಗುಂಡಿ ಸ್ವಚ್ಚಗೊಳಿಸಲು ಪೌರಕಾರ್ಮಿಕ ನೇರವಾಗಿ ಇಳಿಯದಂತೆ ಹಾಗೂ ಸಾರ್ವಜನಿಕರು ಇಂತಹ ಕಾರ್ಯಗಳಿಗೆ ಪೌರಕಾರ್ಮಿಕರನ್ನು ನೇಮಿಸದಂತೆ ಜನಜಾಗೃತಿ ಮೂಡಿಸಬೇಕು. ಶೌಚಾಲಯ ಗುಂಡಿಗಳನ್ನು ಸ್ವಚ್ಚಗೊಳಿಸಲು ಜೆಟ್ಟಿಂಗ್ ಮಶೀನ್‌ಗಳನ್ನೇ ಬಳಸಬೇಕೆಂಬ ಕರಪತ್ರಗಳನ್ನು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳೊಂದಿಗೆ ಮನ-ಮನೆಗಳಿಗೆ ಹಂಚಬೇಕು. ಇನ್ನು ಮುಂದೆ ಮರಣ ಪ್ರಕರಣಗಳು ಕಂಡು ಬಂದಲ್ಲಿ ಕಟ್ಟಡದ ಮಾಲಿಕರೊಂದಿಗೆ ಸಂಬಂಧಿಸಿದ ಅಧಿಕಾರಿಯೂ ಸೆರೆಮನೆವಾಸ ಅನುಭವಿಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಮ್. ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ, ಪೌರಾಯುಕ್ತ ಎಸ್. ಯೋಗೇಶ್ವರ, ಉಪವಿಭಾಗಾಧಿಕಾರಿ ಅಭಿಜೀನ್ ಸೇರಿದಂತೆ ಇತರರು ಇದ್ದರು.